ತೇರದಾಳ ಪ್ರಕರಣದ ಬಗ್ಗೆ ಸರಕಾರ, ಬಿಜೆಪಿ ಮಹಿಳಾ ಸಂಘಟನೆಗಳ ಮೌನ ಯಾಕೆ: ಡಿಕೆಶಿ ಪ್ರಶ್ನೆ
ಬೆಂಗಳೂರು, ಡಿ.5: 'ತೇರದಾಳದಲ್ಲಿ ಪುರಸಭೆ ಮಹಿಳಾ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯಮಂತ್ರಿಯಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಲಿ, ಬಿಜೆಪಿ ಮಹಿಳಾ ಸಂಘಟನೆಗಳಾಗಲಿ ಮೌನವಾಗಿರುವುದೇಕೆ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಶಮಿವಾರ ಸದಾಶಿವ ನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, 'ಭ್ರೂಣ ಹತ್ಯೆ ಎಂದರೆ ಕೊಲೆಗೆ ಸಮ. ಜತೆಗೆ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆದಿದೆ. ಇದು ಮಾನಭಂಗ ಹಾಗೂ ದೌರ್ಜನ್ಯದ ಪ್ರಕರಣ. ಮಹಾಭಾರತದಲ್ಲಿ ದುಶ್ಶಾಸನನ ದೌರ್ಜನ್ಯ ಕಣ್ಣೆದುರು ಕಂಡಂತೆ ಈ ಪ್ರಕರಣವನ್ನು ಮಾಧ್ಯಮಗಳು ತೋರಿಸಿವೆ. ಆದರೂ ಈವರೆಗೂ ಪೊಲೀಸರು ಪ್ರಕರಣ ದಾಖಲಿಸಿ, ಯಾರೊಬ್ಬರನ್ನೂ ಬಂಧಿಸಿಲ್ಲ ಎಂದು ಕಿಡಿ ಕಾರಿದರು.
ಮುಖ್ಯಮಂತ್ರಿಯಾಗಲಿ, ಮಹಿಳಾ ಸಚಿವರಾಗಲಿ, ಶೋಭಾ ಕರಂದ್ಲಾಜೆ ಅವರಾಗಲಿ, ದೇಶದಲ್ಲಿರುವ ಮಹಿಳಾ ಸಂಘಟನೆಗಳಾಗಲಿ ಯಾರೊಬ್ಬರೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಇದು ಕೇವಲ ದೇಶ ಮಟ್ಟದಲ್ಲ, ಅಂತಾರಾಷ್ಟ್ರೀಯ ಮಟ್ಟದ ಪ್ರಕರಣ. ಬಿಜೆಪಿಯವರು ದೌರ್ಜನ್ಯ ಎಸಗಿದ ತಮ್ಮ ಶಾಸಕನ ರಕ್ಷಣೆಗಾಗಿ ನಿಂತಿರುವುದು ನಾಚಿಕೆಗೇಡಿನ ವಿಚಾರ. ಮುಖ್ಯಮಂತ್ರಿಯವರೇ ಇದೇ ಪರಿಸ್ಥಿತಿ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಬಂದಿದ್ದರೆ, ಶೋಭಾ ಕರಂದ್ಲಾಜೆ ಅವರೇ ಹಾಗೂ ಶಶಿಕಲಾ ಜೊಲ್ಲೆ ಅವರೇ ನಿಮಗೆ ಈ ರೀತಿ ಆಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಡಿಕೆಶಿ ಪ್ರಶ್ನಿಸಿದರು.
ಈ ವಿಚಾರವಾಗಿ ನಾನು, ನಮ್ಮ ವಿರೋಧ ಪಕ್ಷದ ನಾಯಕರು ಹಾಗೂ ಮಹಿಳಾ ಶಾಸಕರು ಇಂದು ತೇರದಾಳಕ್ಕೆ ಹೋಗಿ ಸಂತ್ರಸ್ತರ ಪರ ನಿಲ್ಲಲು ನಿರ್ಧರಿಸಿದ್ದೇವೆ. ಅಧಿವೇಶನದಲ್ಲೂ ಈ ವಿಚಾರವಾಗಿ ನಮ್ಮ ಹೋರಾಟ ಮುಂದುವರಿಸುತ್ತೇವೆ. ಈ ಪ್ರಕರಣ ಮಾನವೀಯತೆ ಹಾಗೂ ಹೆಣ್ಣಿನ ಕುಲಕ್ಕೆ ಮಾಡಿರುವ ಅಪಮಾನ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯೇ ಆ ಘಟನೆಗೆ ಕಾರಣರಾದವರ ಬಗ್ಗೆ ಹೇಳಿದ ನಂತರವೂ ಇನ್ನು ಅವರನ್ನು ಬಂಧಿಸಿಲ್ಲ ಎಂದರೆ, ಈ ಸರಕಾರದಲ್ಲಿ ಮಹಿಳೆಯರಿಗೆ ಯಾವ ರೀತಿಯ ರಕ್ಷಣೆ, ಗೌರವ ಸಿಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ಛೇಡಿಸಿದರು.
ಅಧಿಕಾರಕ್ಕಾಗಿ ಸಮಾಜ ಒಡೆಯಲಾಗುತ್ತಿದೆ
ಬಿಜೆಪಿಯು ಅಧಿಕಾರಕ್ಕಾಗಿ ಸಮಾಜವನ್ನು ಜಾತಿ, ಧರ್ಮ ಹಾಗೂ ಇತರ ವಿಚಾರವಾಗಿ ಒಡೆದು ಆಳುತ್ತಿದೆ. ಈ ಬಗ್ಗೆ ನಾನು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಪ್ರಾಧಿಕಾರ ರಚನೆ ವಿಚಾರವಾಗಿ ನಾವು ಈಗಲೇ ಮಾತನಾಡುವುದಿಲ್ಲ. ಅದನ್ನು ಯಾವ ಕಾರಣಕ್ಕಾಗಿ ಮಾಡಿದ್ದಾರೆ? ಬಡವರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಮಾಡಿದರೆ ನಾವು ವಿರೋಧಿಸುವುದಿಲ್ಲ. ಆದರೆ ರಾಜಕೀಯ ಉದ್ದೇಶದಿಂದ ಮಾಡುವುದು ಸರಿಯಲ್ಲ. ಈ ಬಗ್ಗೆ ಪ್ರಜಾಪ್ರಭುತ್ವದ ಭಾಗವಾಗಿರುವ ಮಾಧ್ಯಮಗಳೇ ಜನರಿಗೆ ಬೆಳಕು ಚೆಲ್ಲಬೇಕು' ಎಂದರು.
'ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಲವ್ ಜಿಹಾದ್ ನಿಯಂತ್ರಣ ಕಾನೂನು ಜಾರಿ ಸುಲಭವಲ್ಲ, ಇದಕ್ಕೆ ಅಡೆ-ತಡೆಗಳಿವೆ. ಈ ಕಾಯ್ದೆಗಳಿಗೆ ಕಾಂಗ್ರೆಸ್ ಪಕ್ಷದ ವಿರೋಧವಿದೆ. ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ಉದ್ದೇಶದಿಂದ ಸಮುದಾಯಗಳನ್ನು ಛಿದ್ರ ಮಾಡಲು ಹೊರಟಿದೆ ಇದು ಸರಿಯಲ್ಲ. ಈ ಬಗ್ಗೆ ವಿಧಾನಸಭೆಯ ಒಳಗೆ ಮತ್ತು ಕೋರ್ಟ್ ನಲ್ಲಿಯೂ ನಾವು ಹೋರಾಟ ನಡೆಸುತ್ತೇವೆ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ