×
Ad

ನಕಲಿ ದಾಖಲೆ ಸಲ್ಲಿಸಿ ಬಹುಕೋಟಿ ಸಾಲ ಪಡೆದು ವಂಚನೆ ಆರೋಪ: ಪ್ರಕರಣ ದಾಖಲಿಸಿದ ಸಿಬಿಐ

Update: 2020-12-05 18:30 IST

ಬೆಂಗಳೂರು, ಡಿ.5: ಐಡಿಬಿಐ ಬ್ಯಾಂಕಿಗೆ ನಕಲಿ ದಾಖಲೆ ಪತ್ರಗಳನ್ನು ಸಲ್ಲಿಕೆ ಮಾಡಿ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚನೆ ಮಾಡಿರುವ ಆರೋಪ ಪ್ರಕರಣ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಏನಿದು ದೂರು?: ಐಡಿಬಿಐ ಬ್ಯಾಂಕಿನ ಉಪಪ್ರಬಂಧಕ ಜಿ.ಬಸಂತ್ ಚಕ್ರವರ್ತಿ ನೀಡಿದ ದೂರಿನ ಅನ್ವಯ ಸಿಬಿಐ, ಗ್ರೀನ್ ಆಗ್ರ್ಯಾನಿಕ್ಸ್ ಪ್ರೈವೈಟ್ ಲಿಮಿಟೆಡ್ (ಜಿಓಐಪಿಎಲ್) ನಿರ್ದೇಶಕರಾದ ರಮೇಶ್‍ಬಿ.ಗೌಡ, ಜೆ.ಸಿ.ರಮ್ಯಾ, ಚಂದ್ರಶೇಖರ್ ಬಾಲಸುಬ್ರಮಣ್ಯ ಎಂಬುವರ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿಗಳಾದ ರಮೇಶ್ ಬಿ.ಗೌಡ, ಜೆ.ಸಿ.ರಮ್ಯಾ, ದೊಡ್ಡಬಳ್ಳಾಪುರ, ಶ್ರೀರಂಗಪಟ್ಟಣ ಹಾಗೂ ಬೇಲೂರಿನ 65 ಎಕರೆಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿ ವಿದೇಶಕ್ಕೆ ರಫ್ತು ಮಾಡುವುದಾಗಿ ಹೇಳಿ ಸಾಲ ಪಡೆದಿದ್ದರು ಎನ್ನಲಾಗಿದೆ.

2009ನೇ ಸಾಲಿನಲ್ಲೂ ಐಡಿಬಿಐ ಬ್ಯಾಂಕ್ ಕೃಷಿ ಸಾಲ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿದ ರಮೇಶ್‍ಗೌಡ ಹಾಗೂ ಇತರರು ಕೆನರಾ ಬ್ಯಾಂಕ್‍ನಲ್ಲಿ 41.07 ಕೋಟಿ ರೂ. ಸಾಲ ವರ್ಗಾಯಿಸಿಕೊಂಡು ಹೆಚ್ಚುವರಿಯಾಗಿ ಸಾಲ ನೀಡುವಂತೆ ಮನವಿ ಮಾಡಿದ್ದರು. ಇದೇ ರೀತಿ, 2015ನೇ ಸಾಲಿನಲ್ಲೂ ವಿವಿಧ ಹಂತಗಳಲ್ಲಿ ಬ್ಯಾಂಕಿನಿಂದ 65.33 ಕೋಟಿ ರೂ. ಸಾಲ ಪಡೆಯಲಾಗಿದೆ.

ಅಸಲು ಹಾಗೂ ಬಡ್ಡಿ ಸೇರಿ ಒಟ್ಟು 125.63 ಕೋಟಿ ಬಾಕಿ ಪಾವತಿಯಾಗದ ಕಾರಣ ತನಿಖೆ ಆರಂಭಿಸಲಾಗಿತ್ತು. ಬೇರೆ ಬೇರೆ ಕಂಪೆನಿಗಳ ಮೇಲಿದ್ದ ಸಾಲವನ್ನು ಜಿಓಐಪಿಎಲ್ ಸಾಲ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಐಡಿಬಿಐ ಬ್ಯಾಂಕ್‍ಗೆ ಹಣ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ, ಬ್ಯಾಂಕ್ ನೀಡಿದ ಸಾಲದ ಪೈಕಿ 15 ಕೋಟಿ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದಾಗಿ ಜಿ.ಬಸಂತ್ ಚಕ್ರವರ್ತಿ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News