ಗೊಂಬೆಗಳಲ್ಲಿ ಹೆರಾಯಿನ್ ಇಟ್ಟು ಮಾರಾಟ: ಓರ್ವನ ಸೆರೆ
Update: 2020-12-05 19:14 IST
ಬೆಂಗಳೂರು, ಡಿ.5: ಗೊಂಬೆಯೊಳಗೆ ಹೆರಾಯಿನ್ ಇಟ್ಟು ಮಾರಾಟಕ್ಕೆ ಮುಂದಾಗಿದ್ದ ಪ್ರಕರಣವೊಂದನ್ನು ಭೇದಿಸಿರುವ ಹಲಸೂರು ಠಾಣಾ ಪೊಲೀಸರು, ಓರ್ವನನ್ನು ಬಂಧಿಸಿದ್ದಾರೆ.
ಈಶಾನ್ಯ ಭಾರತ ಮೂಲದ ಸಕೀರ್ ಚೌಧರಿ ಬಂಧಿತ ಆರೋಪಿಯಾಗಿದ್ದು, ಈತನಿಂದ 28 ಲಕ್ಷ ಮೌಲ್ಯದ 165 ಗ್ರಾಂ ತೂಕದ 2,200 ಎಂಡಿಎ ಮಾತ್ರೆಗಳು ಹಾಗೂ 71 ಗ್ರಾಂ ತೂಕದ ಹೆರಾಯಿನ್ ಹಾಗೂ ಕಾರ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಹಳೆ ಮದ್ರಾಸ್ ರಸ್ತೆಯ ಎಂ.ವಿ.ಗಾರ್ಡನ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಅನುಮಾನಾಸ್ಪದವಾಗಿ ಕಂಡ ಕಾರನ್ನು ಅಡ್ಡಗಟ್ಟಿ ವಿಚಾರಿಸಲು ಮುಂದಾದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.