ಬೆಂಗಳೂರು: ಚಿತ್ರಮಂದಿರದಲ್ಲಿ ಪೋಸ್ಟರ್ ಬದಲಾವಣೆ ವೇಳೆ ಬಿದ್ದು ವ್ಯಕ್ತಿ ಮೃತ್ಯು
ಬೆಂಗಳೂರು, ಡಿ. 6: ಚಿತ್ರಮಂದಿರದ ಕಟ್ಟಡ ಮೇಲಿಂದ ಬಿದ್ದು ವ್ಯಕ್ತಿಯೊರ್ವ ಮೃತಪಟ್ಟಿರುವ ಘಟನೆ ಇಲ್ಲಿನ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಚಂದ್ರಪ್ಪ(65) ಎಂಬಾತ ಮೃತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.
ತ್ರಿವೇಣಿ ಚಿತ್ರಮಂದಿರದ ಎದುರು ಸಿನಿಮಾ ಕಟೌಟ್ ಇದ್ದು ಹೊಸ ಸಿನಿಮಾ ಬರುತ್ತಿದ್ದರಿಂದ ಕಟೌಟ್ ಬದಲಾವಣೆ ಮಾಡಲಾಗುತ್ತಿತ್ತು. ಸೆಕ್ಯುರಿಟಿ ಸಿಬ್ಬಂದಿ ಆಗಿದ್ದ ಚಂದ್ರಪ್ಪ, ಕಟೌಟ್ ಮೇಲೆ ಹತ್ತಿ ಪೋಸ್ಟರ್ ಬದಲಾವಣೆ ಮಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವೇಳೆ ಚಿತ್ರಮಂದಿರಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ಯಾರು ಇರಲಿಲ್ಲ. ಚಂದ್ರಪ್ಪ ಬಿದ್ದಿದ್ದು ನೋಡಿ ದಾರಿಹೋಕರು ರಕ್ಷಣೆಗೆ ಹೋಗಿದ್ದರು. ತೀವ್ರ ರಕ್ತಸ್ರಾವವಾಗಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.