ಎಸ್ಸಿ, ಎಸ್ಟಿ ಸರಕಾರಿ ನೌಕರರು ತಮ್ಮ ಜಾತಿ ಸಂಘಟನೆಗಳ ಬಲವರ್ಧನೆಗೆ ಶ್ರಮಿಸಲಿ: ಡಾ.ಸಿ.ಎಸ್.ದ್ವಾರಕನಾಥ್

Update: 2020-12-06 14:21 GMT

ಬೆಂಗಳೂರು, ಡಿ.6: ಎಸ್ಸಿ-ಎಸ್ಟಿ ಸಮುದಾಯದ ಸರಕಾರಿ ನೌಕರರು ತಮ್ಮ ತಮುದಾಯದ ಜಾತಿ ಸಂಘಟನೆಗಳಲ್ಲಿ ಗುರುತಿಸಿಕೊಂಡು ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್ ಇಂದಿಲ್ಲಿ ಕರೆ ನೀಡಿದ್ದಾರೆ.

ರವಿವಾರ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರಕಾರಿ ನೌಕರರ ಸಂಘ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಹಣ ದಿನ ಹಾಗೂ ನೌಕರರ ಸಂಘದ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಎಸ್ಸಿ, ಎಸ್ಟಿ ಸರಕಾರಿ ನೌಕರರನ್ನು ಅವಮಾನಿಸುವ ಪರಿಪಾಠ ಇದೆ. ಇದು ಮೇಲ್ಜಾತಿಗಳ ಕುತಂತ್ರವಾಗಿದೆಯಷ್ಟೆ. ನಮ್ಮದು ಜಾತಿಗಳಿಂದಲೇ ರೂಪಿತಗೊಂಡಿರುವ ಸಮಾಜವಾಗಿದೆ. ಇಲ್ಲಿ ಮೇಲ್ಮುಕ ಚಲನೆಗೂ, ಕೆಳಮುಖ ಚಲನೆಗೂ ಜಾತಿಯೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಎಸ್ಸಿ, ಎಸ್ಟಿ ನೌಕರರು ತಮ್ಮ ಜಾತಿ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಸಮುದಾಯದ ಯುವ ಜನತೆಯನ್ನು ಮುನ್ನೆಲೆಗೆ ತರಬೇಕೆಂದು ಅವರು ಆಶಿಸಿದ್ದಾರೆ.

ಎಸ್ಸಿ ಸಮುದಾಯಕ್ಕೆ ಶೇ.15ರಷ್ಟು, ಎಸ್ಟಿ ಸಮುದಾಯಕ್ಕೆ ಶೇ.3ರಷ್ಟು ಮೀಸಲಾತಿಯಿದೆ. ಆದರೆ, ಹಿಂದುಳಿದವ ವರ್ಗಗಳಿಗೆ ಶೇ.32ರಷ್ಟು ಮೀಸಲಾತಿಯಿದೆ. ಆದರೂ ಹಿಂದುಳಿದ ವರ್ಗದ ಮಂದಿ ಎಸ್ಸಿ, ಎಸ್ಟಿ ಸಮುದಾಯವನ್ನು ಮೀಸಲಾತಿಯನ್ನು ಮುಂದಿಟ್ಟುಕೊಂಡು ಅವಮಾನಿಸುತ್ತಾರೆ. ಹೀಗಾಗಿ ನಾನು ಹಿಂದುಳಿದವ ವರ್ಗಗಳ ಸಮುದಾಯವನ್ನು ಯಾವಾಗಲು ಆತ್ಮವಂಚಕ ಸಮುದಾಯವೆಂದು ಕರೆಯುತ್ತಿರುತ್ತೇನೆಂದು ಅವರು ತಿಳಿಸಿದ್ದಾರೆ.

ಸಂಘಟನೆಗೊಂಡಾಗ ಮಾತ್ರ ಸವಲತ್ತುಗಳನ್ನು ಪಡಯಲು ಸಾಧ್ಯವೆಂದು ನಮ್ಮ ಇತಿಹಾಸ ನಮಗೆ ತಿಳಿಸಿದೆ. ಹೀಗಾಗಿ ಶೋಷಿತ ಸಮುದಾಯಗಳು ಹೋರಾಟ, ಪ್ರತಿಭೆ ಹಾಗೂ ಸಂಪತ್ತನ್ನು ಒಂದುಗೂಡಿಸುವ ಮೂಲಕ ಬಲಿಷ್ಠವಾದ ಸಂಘಟನೆಗಳನ್ನು ಕಟ್ಟಿಕೊಂಡು, ಡಾ.ಬಿ.ಆರ್.ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ, ಪೊಲೀಸ್ ವರಿಷ್ಟಾಧಿಕಾರಿ ರವಿ ಡಿ.ಚನ್ನಣ್ಣನವರ್, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ, ಹರ್ತಿಕೋಟಿ ವೀರೇಂದ್ರ ಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬ್ರಾಹ್ಮಣ, ಕ್ಷತ್ರಿಯಾ ಹಾಗೂ ವೈಶ್ಯ ಸಮುದಾಯಗಳು ಒಂದು ಹುಲ್ಲು ಕಡ್ಡಿಯನ್ನು ಉತ್ಪಾದಿಸಿದವರಲ್ಲ. ಆದರೂ ಅಧಿಕಾರ, ಅಂತಸ್ತು ಎಲ್ಲವೂ ಅವರ ಕೈಯಲ್ಲಿದೆ. ತಮ್ಮ ಶ್ರಮದ ಮೂಲಕ ಸಂಪತ್ತನ್ನು ಉತ್ಪಾದಿಸುವ ದಲಿತ, ಹಿಂದುಳಿದವರು ಇಂದಿಗೂ ಅವಕಾಶ ವಂಚಿತರಾಗಿದ್ದಾರೆ. ಕೇವಲ ಓದುವುದನ್ನಷ್ಟೆ ಜ್ಞಾನವೆಂದು ಅಪಪ್ರಚಾರ ಮಾಡುತ್ತಾ, ನಿಜವಾದ ಕಸುಬುಗಳಿಗೆ ಸಲ್ಲಬೇಕಾದ ಮಾನ್ಯತೆಯನ್ನು ತಿರಸ್ಕರಿಸಲಾಗುತ್ತಿದೆ. ದೇಶದ ಮಹಾನ್‍ ಗ್ರಂಥಗಳಾದ ರಾಮಾಯಣ, ಮಹಾಭಾರತ ಹಾಗೂ ಸಂವಿಧಾನವನ್ನು ರಚಿಸಿದವರು ಬ್ರಾಹ್ಮಣೇತರರು. ಹಾಗಾದರೆ ಯಾವಾಗಲೂ ಪ್ರತಿಭೆ ಬಗ್ಗೆ ಮಾತನಾಡುವ ಬ್ರಾಹ್ಮಣರ ಕೊಡುಗೆ ಏನೆಂದು ಪ್ರಶ್ನಿಸಬೇಕಾಗಿದೆ.

-ಡಾ.ಸಿ.ಎಸ್.ದ್ವಾರಕನಾಥ್, ಮಾಜಿ ಅಧ್ಯಕ್ಷ, ಹಿಂದುಳಿದ ವರ್ಗಗಳ ಆಯೋಗ

ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.7.5ರಷ್ಟು ಹೆಚ್ಚಳ ಮಾಡಬೇಕೆಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇವಲ ಭರವಸೆಗಳನ್ನು ಕೊಡುತ್ತಾ ದಿನಗಳನ್ನು ಮುಂದೂಡುತ್ತಾ ಬರುತ್ತಿದ್ದಾರೆ. ಆದರೆ, ಯಾವುದೇ ಹೋರಾಟ ಮಾಡದ, ಧರಣಿ ಕೂರದ, ಪ್ರತಿಭಟಿಸದ ಶೇ.2.5ರಷ್ಟಿರುವ ಮೇಲ್ಜಾತಿ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ಕೊಡಲಾಗಿದೆ. ಸರಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಸವರುವಂತಹ ಕೆಲಸ ಮಾಡುತ್ತಿವೆಯೆಂದು ಎಸ್ಟಿ ಸರಕಾರಿ ನೌಕರರ ಸಂಘದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News