ಡಿ.8ರ ಭಾರತ್ ಬಂದ್‍ಗೆ ಕಾಂಗ್ರೆಸ್ ಬೆಂಬಲ: ಬೀದಿಗಿಳಿದು ಪ್ರತಿಭಟನೆ ನಡೆಸಲು ಸುರ್ಜೆವಾಲಾ ಕರೆ
ಬೆಂಗಳೂರು, ಡಿ.6: ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಪತನವಾಗುವುದು ಖಚಿತ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ನಾಯಕರೂ ಈ ರಾಜ್ಯ ಸರಕಾರದ ಮೇಲೆ ಬೇಸತ್ತಿದ್ದಾರೆ. ಮತ್ತೊಂದೆಡೆ ಜನರ ಒಳಿತಿಗಾಗಿ ಬಿಜೆಪಿ ಸರಕಾರ ಕೆಲಸ ಮಾಡುತ್ತಿಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಪತನವಾಗಲಿದೆ ಎಂದು ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಜನರಿಂದ ಆಯ್ಕೆಯಾದ ಸರಕಾರವಲ್ಲ. ಇದೊಂದು ಅಕ್ರಮ ಹಣದ ಮೂಲಕ ರಚನೆಯಾದ ಸರಕಾರ ಎಂದ ಅವರು, ಡಿ.8ರಂದು ರೈತರ ಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‍ಗೆ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಸಿಡಬ್ಲೂಸಿ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.