ಜಪಾನ್ ಶೋಧ ನೌಕೆ ಕ್ಷುದ್ರಗ್ರಹದ ಮಾದರಿಯೊಂದಿಗೆ ಭೂಮಿಗೆ ವಾಪಸ್

Update: 2020-12-06 17:24 GMT

ಟೋಕಿಯೊ (ಜಪಾನ್), ಡಿ. 6: ದೂರದ ಕ್ಷುದ್ರ (ಸಣ್ಣ) ಗ್ರಹವೊಂದರಿಂದ ಪಡೆಯಲಾದ ಮಾದರಿಗಳನ್ನು ಹೊತ್ತು ಜಪಾನ್‌ನ ಶೋಧಕ ನೌಕೆ ‘ಹಯಬುಸ-2’ರ ಕ್ಯಾಪ್ಸೂಲ್ ರವಿವಾರ ಭೂಮಿಯನ್ನು ತಲುಪಿದೆ.

ಈ ಅತ್ಯಮೂಲ್ಯ ಮಾದರಿಗಳು 0.1 ಗ್ರಾಂಗಿಂತ ಹೆಚ್ಚಿರದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ವಿಶ್ವದ ರಚನೆ ಮತ್ತು ಜೀವಿಗಳ ಉಗಮದ ಮೇಲೆ ಈ ಮಾದರಿಯು ಹೆಚ್ಚಿನ ಬೆಳಕು ಚೆಲ್ಲಬಹುದು ಎಂಬ ನಿರೀಕ್ಷೆಯನ್ನು ಅವರು ಹೊಂದಿದ್ದಾರೆ.

ಮಾದರಿಗಳನ್ನು ಹೊತ್ತ ಕ್ಯಾಪ್ಸೂಲ್ ಜಪಾನ್ ಕಾಲಮಾನ ಮುಂಜಾನೆ ಸುಮಾರು 2:30ಕ್ಕೆ ಭೂಮಿಯ ವಾತಾವರಣವನ್ನು ಪ್ರವೇಶಿಸಿತು. ಇದಕ್ಕೂ ಮೊದಲು ಕ್ಯಾಪ್ಸೂಲ್ ಭೂಮಿಯಿಂದ ಸುಮಾರು 2,20,000 ಕಿಲೋ ಮೀಟರ್ ದೂರದಲ್ಲಿ ಶೋಧಕ ನೌಕೆಯಿಂದ ಕಳಚಿಕೊಂಡಿತು. ಕ್ಯಾಪ್ಸೂಲ್ ರಾತ್ರಿ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಭೂಮಿಯತ್ತ ಧಾವಿಸುತ್ತಿರುವ ಧೂಮಕೇತುವಿನಂತೆ ಕಂಡಿತು.

ಕ್ಯಾಪ್ಸೂಲನ್ನು ದಕ್ಷಿಣ ಆಸ್ಟ್ರೇಲಿಯದ ಮರುಭೂಮಿಯಲ್ಲಿ ಪತ್ತೆಹಚ್ಚಲಾಗಿದೆ. ಈಗ ಅದನ್ನು ಜಪಾನ್‌ಗೆ ಕಳುಹಿಸಲಾಗುತ್ತಿದೆ.

2014ರಲ್ಲಿ ಉಡಾಯಿಸಲ್ಪಟ್ಟ ‘ಹಯಬುಸ-2’ ಶೋಧಕ ನೌಕೆಯು ಸುಮಾರು 30 ಕೋಟಿ ಕಿಲೋಮೀಟರ್ ದೂರದಲ್ಲಿರುವ ‘ರಯಗು’ ಎಂಬ ಕ್ಷುದ್ರ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ವಾಪಸಾಗಿದೆ.

ಕ್ಷುದ್ರಗ್ರಹದಿಂದ ಪಡೆಯಲಾದ ಮಾದರಿಗಳು ವಿಶ್ವದ ಉಗಮವಾದಂದಿನಿಂದ ಬದಲಾಗದೇ ಉಳಿದುಕೊಂಡಿವೆ ಎಂದು ಭಾವಿಸಲಾಗಿದೆ.

ಪ್ರಾಚೀನ ರಚನೆಯನ್ನು ಕಾಯ್ದುಕೊಂಡಿರುವ ಕ್ಷುದ್ರಗೃಹಗಳು

ಶೋಧಕ ನೌಕೆಯು ಕ್ಷುದ್ರ ಗ್ರಹ ‘ರಯಗು’ವಿನ ಮೇಲ್ಮೈಯ ಧೂಳು ಮತ್ತು ಮೇಲ್ಮೈಯಿಂದ ಒಳಗಿನ ಮಾದರಿಗಳನ್ನು ಸಂಗ್ರಹಿಸಿದೆ. ಭೂಮಿ ಮುಂತಾದ ಆಕಾಶಕಾಯಗಳು ಬಿಸಿಯಾಗುವಿಕೆ ಮತ್ತು ಘನೀಕರಣ ಮುಂತಾದ ಆಮೂಲಾಗ್ರ ಬದಲಾವಣೆಗಳಿಗೆ ಕಾಲ ಕಾಲಕ್ಕೆ ಒಳಗಾಗಿವೆ ಹಾಗೂ ಆ ಮೂಲಕ ಅವುಗಳ ಮೇಲ್ಮೈ ಮತ್ತು ಒಳ ಭಾಗದ ಮಾದರಿಗಳ ರಚನೆಯಲ್ಲಿ ಬದಲಾವಣೆಗಳಾಗಿವೆ.

ಆದರೆ, ಸಣ್ಣ ಗ್ರಹಗಳು ಮತ್ತು ಅವುಗಳಿಗಿಂತಲೂ ಕಿರಿದಾದ ಕ್ಷುದ್ರಗ್ರಹಗಳ ಪದಾರ್ಥಗಳು ಕರಗಿಲ್ಲ. ಹಾಗಾಗಿ ಅವುಗಳಲ್ಲಿ 460 ಕೋಟಿ ವರ್ಷಗಳ ಹಿಂದಿನ ಪದಾರ್ಥಗಳು ಈಗಲೂ ಇವೆ ಎಂಬುದಾಗಿ ಭಾವಿಸಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ‘ಹಯಬುಸ-2’ ಯೋಜನಾ ನಿರ್ವಾಹಕ ಮಕೊಟೊ ಯೊಶಿಕವ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News