ಮುಸ್ಲಿಮ್ ಸಚಿವರಿಲ್ಲದ ಸಂಪುಟ: ಸಚಿವ ಅಶೋಕ್ ಗೆ ಸಿದ್ದು ಹೇಳಿದ್ದೇನು ?

Update: 2020-12-07 13:19 GMT

ಬೆಂಗಳೂರು, ಡಿ.7: ರಾಜಕೀಯವಾಗಿ ನಮಗೆ ಮೊದಲ ವೈರಿ ಬಿಜೆಪಿ, ಆರೆಸೆಸ್ಸ್. ಆ ವಿಚಾರದಲ್ಲಿ ರಾಜಿಯೇ ಇಲ್ಲ. ನಾವು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ನಡೆಯುತ್ತಿದ್ದ ಚರ್ಚೆ ವೇಳೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಯಾರಿಗೆ ಟಿಕೆಟ್ ಕೊಡುತ್ತೀರಾ ಎಂದು ಸಚಿವ ಈಶ್ವರಪ್ಪನ್ನು ಕೇಳಿದರೆ ಮುಸ್ಲಿಮರಿಗೆ ಮಾತ್ರ ಕೊಡಲ್ಲ ಎಂದು ಹೇಳುತ್ತಾರೆ. ರಾಜ್ಯದಲ್ಲಿ ಶೇ.13ರಷ್ಟು ಮುಸ್ಲಿಮರು ಇದ್ದಾರೆ. ಆದರೆ, ಬಿಜೆಪಿಯಲ್ಲಿ ಆ ಸಮುದಾಯದ ಎಷ್ಟು ಜನ ಶಾಸಕರು ಇದ್ದಾರೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಮಾಧ್ಯಮದವರು ಬೆಳಗಾವಿಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡುತ್ತೀರಾ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯೆಯಾಗಿ ಈಶ್ವರಪ್ಪ ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ. ಯಾರು ನಮ್ಮ ಕಾರ್ಯಕರ್ತರಿದ್ದಾರೊ ಅವರಿಗೆ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದರು.

ಆಗ ಕಂದಾಯ ಸಚಿವ ಆರ್.ಅಶೋಕ್ ಎದ್ದುನಿಂತು, ಬಿಜೆಪಿಯಲ್ಲಿ ಜಾತಿ, ಧರ್ಮದ ನಡುವೆ ತಾರತಮ್ಯವಿಲ್ಲ. ಪ್ರಧಾನಿ ಹೇಳಿದಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೇಲೆ ನಮಗೆ ನಂಬಿಕೆಯಿದೆ. ಬಿಜೆಪಿ ಜೊತೆ ಹೋದರೆ ಏನೋ ಆಗುತ್ತದೆ ಎಂದು ಕಾಂಗ್ರೆಸ್‍ನವರು ಮುಸ್ಲಿಮರನ್ನು ಮರಳು ಮಾಡಿ ಇಟ್ಟಿದ್ದಾರೆ. ಆದರೆ, ನಮ್ಮ ಪಕ್ಷಕ್ಕೆ ಈಗ ಮುಸ್ಲಿಮರು ಬರುತ್ತಿದ್ದಾರೆ. ಹಲವಾರು ಜನ ಕಾರ್ಪೋರೇಟರ್ ಗಳು ಇದ್ದಾರೆ. ನಿಗಮ, ಮಂಡಳಿಗಳ ಅಧ್ಯಕ್ಷರು ಇದ್ದಾರೆ ಎಂದರು.

ಈ ವೇಳೆ ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದ ಉಪ ಸಭಾಧ್ಯಕ್ಷ ಆನಂದ್ ಮಾಮನಿ, ಕಾಂಗ್ರೆಸ್‍ನವರು ಮುಸ್ಲಿಮರನ್ನು 70 ವರ್ಷದಿಂದ ಮರಳು ಮಾಡುತ್ತಿದ್ದಾರೆ. ಅವರಿಗೆ ಈಗ ಗೊತ್ತಾಗಿದೆ ಎಂದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್, ನೀವು ಆ ಸ್ಥಾನದಲ್ಲಿ ಕೂತು ಇಂತಹ ಹೇಳಿಕೆ ನೀಡಬಾರದು ಎಂದರು.

ನಂತರ ಮಾತು ಮುಂದುವರಿಸಿದ ಅಶೋಕ್, ಕೇಂದ್ರ ಸರಕಾರದಲ್ಲಿಯೂ ಮುಸ್ಲಿಮರು ಸಚಿವರಿದ್ದಾರೆ ಎಂದರು. ಆದರೆ, ರಾಜ್ಯದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಚಿವರು ಇಲ್ಲವಲ್ಲ ಎಂದು ಖಾದರ್ ಕಾಲೆಳೆದರು. ನೀವೆ ಬನ್ನಿ ಎಂದು ಅಶೋಕ್ ಕರೆದರು. ಆಗ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಜಾತ್ಯತೀತ ತತ್ವವನ್ನು ಮೈಗೂಡಿಸಿಕೊಂಡಿರುವ ಯಾರೂ ಕೂಡ ನಿಮ್ಮ ಜೊತೆ ಬರಲ್ಲ ಎಂದರು.

ಆಪರೇಷನ್ ಕಮಲದ ಸಂದರ್ಭದಲ್ಲಿ ನೀನು ಏನೇನು ಮಾಡಿದ್ದೀಯಾ ಅಂತಾ ಗೊತ್ತಿದೆ ಎಂದು ಅಶೋಕ್‍ಗೆ ತಿರುಗೇಟು ನೀಡಿದರು. ಆಗ ಕಾನೂನು ಸಚಿವ ಮಾಧುಸ್ವಾಮಿ ಎದ್ದುನಿಂತು, ಆಗ ನಿಮ್ಮಿಂದ ಆದ ಸಹಕಾರವನ್ನು ಮರೆಯುವಂತಿಲ್ಲ ಎಂದರು. ನಾನು ಬಿಜೆಪಿಯವರಿಗೆ ಏನು ಸಹಾಯ ಮಾಡಿದ್ದೇನೆ. ತಾತ್ವಿಕ ಹಾಗೂ ಸೈದ್ಧಾಂತಿಕವಾಗಿ ನಿಮ್ಮನ್ನು ವಿರೋಧ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News