ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ 'ಭಾರತ್ ಬಂದ್': ಜೆಡಿಎಸ್ ಸದಸ್ಯರ ಸಭಾತ್ಯಾಗ
ಬೆಂಗಳೂರು, ಡಿ. 8: ಕೇಂದ್ರ ಸರಕಾರದ ರೈತ ವಿರೋಧಿ ಕಾನೂನನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ‘ಭಾರತ್ ಬಂದ್’ ವಿಷಯ ವಿಧಾನಸಭೆಯ ಅಧಿವೇಶನದಲ್ಲಿಯೂ ಪ್ರತಿಧ್ವನಿಸಿತು.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯ ಬಳಿಕ ಮಾತನಾಡಿದ ಹಿರಿಯ ಸದಸ್ಯರಾದ ಎಚ್.ಕೆ.ಕುಮಾರಸ್ವಾಮಿ, ಶಿವಲಿಂಗೇಗೌಡ, ಶ್ರೀನಿವಾಸಗೌಡ, ಅನ್ನದಾನಿ ಸೇರಿದಂತೆ ಜೆಡಿಎಸ್‍ನ ಎಲ್ಲ ಸದಸ್ಯರು, ರೈತರಿಗೆ ಬೆಂಬಲ ನೀಡಲು ವಿಧಾನಸೌಧ-ವಿಕಾಸಸೌಧದ ಮುಂಭಾಗದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ತೆರಳುತ್ತೇವೆ ಎಂದು ಸಭಾತ್ಯಾಗ ಮಾಡಿದರು.
ಕಾಂಗ್ರೆಸ್ ಪ್ರತಿಭಟನೆ: ಕೇಂದ್ರದ ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರೈತರು ಕರೆ ನೀಡಿರುವ ಭಾರತ್ ಬಂದ್‍ಗೆ ಬೆಂಬಲ ಸೂಚಿಸಿ, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಕಪ್ಪುಪಟ್ಟಿ ಧರಿಸಿ, ಕಪ್ಪು ಬಾವುಟ ಪ್ರದರ್ಶಿಸಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿದರು.
ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಿರಿ, ರೈತ ವಿರೋಧಿ ಪ್ರಧಾನಿ ಮೋದಿ ಹಾಗೂ ರೈತ ಮತ್ತು ಜನವಿರೋಧಿ ಕೇಂದ್ರ ಸರಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಮೊಳಗಿಸಿದ ಕಾಂಗ್ರೆಸ್ ಶಾಸಕರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, 'ಕೃಷಿಗೆ ಮಾರಕವಾದ ಮಸೂದೆಗಳ ವಿರುದ್ಧ ರೈತ ಸಮುದಾಯ ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನಿರಂತರವಾಗಿ ಇರಲಿದೆ. ರೈತರ ಪಾಲಿಗೆ ಮರಣ ಶಾಸನವಾದ ಕಾನೂನುಗಳು ಜಾರಿಯಾಗದಂತೆ ತಡೆಯಲು ಸದನದ ಒಳಗೆ ಮತ್ತು ಹೊರಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು' ಎಂದು ತಿಳಿಸಿದರು.
'ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಳಿಸುವ ಕಾನೂನುಗಳು, ನೀತಿ ನಿಯಮಗಳು ಸಕಾರಾತ್ಮಕ ಬದಲಾವಣೆ ತರುವಂತಿರಬೇಕೇ ಹೊರತು ಸರ್ವನಾಶಕ್ಕೆ ದಾರಿಮಾಡಿಕೊಂಡುವಂತೆ ಇರಬಾರದು. ರೈತರೇ ತಮಗೆ ಈ ಮಸೂದೆ ಬೇಡವೆಂದರೂ, ಏನಾದರೂ ಆಗಲಿ ಮಸೂದೆ ಜಾರಿ ಮಾಡಿಯೇ ತೀರುತ್ತೇವೆ ಎಂದು ಹೊರಟಿರಲು ಕಾರಣವೇನು? ಕೇಂದ್ರದ ಬಿಜೆಪಿ ಸರಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿಯಿದೆಯೇ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
'ಒಂದೆಡೆ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದು ಎಪಿಎಂಸಿಗಳನ್ನು ಮುಚ್ಚಲು ಸಕಾಲ ಎನ್ನುತ್ತಾರೆ, ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ಎಪಿಎಂಸಿಗಳನ್ನು ಮುಚ್ಚಲ್ಲ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂದೆಯೂ ಸಿಗುತ್ತೆ ಅಂತಾರೆ. ಇವರಿಬ್ಬರಲ್ಲಿ ಯಾರು ಸತ್ಯ ಹೇಳ್ತಿದ್ದಾರೆ? ಯಾರು ಸುಳ್ಳು ಹೇಳ್ತಿದ್ದಾರೆ?' ಎಂದು ಸಿದ್ದರಾಮಯ್ಯ ಕೇಳಿದರು.
ಕೇಂದ್ರ ಸರಕಾರದ ರೈತ ಕಾಯ್ದೆಗಳು ರೈತ ವಿರೋಧಿಯಾಗಿವೆ. ಈ ಕೂಡಲೇ ಈ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಇಂದು ರೈತರು ಭಾರತ್ ಬಂದ್ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಬೆಂಬಲವಾಗಿ ಇಂದು ಕಾಂಗ್ರೆಸ್ ಶಾಸಕರು ಧರಣಿ ನಡೆಸಿ ಸಾಂಕೇತಿಕ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು.
ರೈತರ ಪಾಲಿಗೆ ಮರಣ ಶಾಸನ: ಕೇಂದ್ರ ಸರಕಾರದ ರೈತ ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನವಾಗಲಿವೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಹಸಿರು ಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿದರು. ಶಾಲಿಗೆ ಬೆಲೆಯೂ ಇಲ್ಲ, ಗೌರವವೂ ಇಲ್ಲ. ರೈತರ ಬಗ್ಗೆ ಕಾಳಜಿಯೂ ಇಲ್ಲ. ಲಂಚ ಹೊಡೆಯುವುದರಲ್ಲೇ ಇವರ ಕಾಳಜಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹೋರಾಟಕ್ಕೆ ಜಾತಿ, ಧರ್ಮ ಯಾವುದೂ ಇಲ್ಲ. ವಿದೇಶಗಳಿಂದಲೂ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷ ಸಹ ರೈತರ ಪರ ನಿಲ್ಲಲಿದೆ. ನೂರಾರು ವರ್ಷಗಳಿಂದ ಜಾರಿಯಲ್ಲಿದ್ದ ಕಾನೂನುಗಳನ್ನು ಯಾರ ಅಭಿಪ್ರಾಯಗಳನ್ನು ಪಡೆಯದೆ ಏಕಾಏಕಿ ಬದಲಾಯಿಸಲಾಗಿದೆ. ಇದು ರೈತರ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಅವರನ್ನು ಗುಲಾಮಗಿರಿ ವ್ಯವಸ್ಥೆಗೆ ತಳ್ಳುವ ಕರಾಳ ಕಾಯ್ದೆಗಳು ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.
ಧರಣಿಯಲ್ಲಿ ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್, ರಾಮಲಿಂಗಾರೆಡ್ಡಿ, ಯು.ಟಿ.ಖಾದರ್, ಝಮೀರ್ ಅಹ್ಮದ್ ಖಾನ್, ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್‍ನ ಶಾಸಕರು, ಮೇಲ್ಮನೆ ಸದಸ್ಯರು ಭಾಗವಹಿಸಿದ್ದರು.