×
Ad

ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಚರಂಡಿಗೆ ಎಸೆಯಿರಿ: ಬಿ.ಕೆ.ಹರಿಪ್ರಸಾದ್ ಕಿಡಿ

Update: 2020-12-08 19:37 IST

ಬೆಂಗಳೂರು, ಡಿ.8: ರಾಜ್ಯ ಸರಕಾರ ತರಲು ಹೊರಟಿರುವ ಭೂ ಸುಧಾರಣಾ ಎರಡನೇ ತಿದ್ದುಪಡಿ ಕಾಯ್ದೆಯು ರೈತರಿಗೆ ಕರಾಳ ಶಾಸನವಾಗಲಿದ್ದು, ಅದನ್ನು ಚರಂಡಿಗೆ ಎಸೆಯಿರಿ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮೇಲ್ಮನೆಯಲ್ಲಿ ಸರಕಾರದ ವಿರುದ್ಧ ಹರಿಹಾಯ್ದರು.

ಮಂಗಳವಾರ ಮೇಲ್ಮನೆಯಲ್ಲಿ ಹರಿಪ್ರಸಾದ್ ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಕುರಿತು ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಆಯನೂರು ಮಂಜುನಾಥ್ ಇದು ಸಂಸತ್ತು ಅಲ್ಲ. ಮೇಲ್ಮನೆಯಲ್ಲಿ ರಾಜ್ಯದ ವಿಷಯದ ಬಗ್ಗೆ ಮಾತನಾಡಿ. ಮೇಲ್ಮನೆಯಲ್ಲಿ ಎಲ್ಲವನ್ನೂ ಮಾತಾಡೋಕೆ, ಇದು ಡಸ್ಟ್‍ಬಿನ್ ಅಲ್ಲ ಎಂದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹರಿಪ್ರಸಾದ್, ಪ್ರಧಾನಿಯು ಸಂಸತ್ತನ್ನೇ ಡಸ್ಟ್ ಬಿನ್ ಮಾಡಿದ್ದಾರೆ ಎಂದು ತಿರುಗೇಟು ನೀಡುತ್ತಾ, ಕರಾಳ ಕಾನೂನು ಡಸ್ಟ್ ಬಿನ್‍ಗೆ ಅಲ್ಲ, ಚರಂಡಿಗೆ ಎಸೆಯಬೇಕು ಎಂದು ಹೇಳಿದರು.

ಕರ್ನಾಟಕವು ಒಕ್ಕೂಟ ವ್ಯವಸ್ಥೆಯಲ್ಲಿ ಒಂದಾಗಿದೆ. ನೀವು ಮಾತನಾಡಬೇಡಿ ಎಂದರೆ ಹೇಗೆ. ಇಂತಹ ನಿಲುವು ಸದನಕ್ಕೆ ಶೋಭೆ ತರುವುದಿಲ್ಲ. ನಾವಿಂದು ರೈತರ ಸಮಸ್ಯೆಗಳ ಕುರಿತು ಚರ್ಚೆ ಮಾಡುತ್ತಿದ್ದೇವೆ. ಮಧ್ಯರಾತ್ರಿಯಲ್ಲಿಯೇ ಜಿಎಸ್ಟಿ ಬಿಲ್ ತಂದರು ಎಂದು ನುಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಡಸ್ಟ್ ಬಿನ್ ಪದವನ್ನು ಕಡತದಿಂದ ಕೈಬಿಡುವಂತೆ ಸೂಚಿಸಿದರು.

ಕೋರ್ಟ್‍ನಲ್ಲಿ ವಿವಾದ ಇರುವಾಗ ಇಲ್ಲಿ ಅದನ್ನು ಹೇಗೆ ಚರ್ಚೆಗೆ ತೆಗೆದುಕೊಳ್ಳಲು ಸಾಧ್ಯ? ಕೋರ್ಟ್ ನಲ್ಲಿ ಬಾಕಿ ಇರುವ ಪ್ರಕರಣದ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಹಮತ ವ್ಯಕ್ತಪಡಿಸಿದರು. ನಾವೇ ನಿಯಮ ಮಾಡಿಕೊಂಡಿದ್ದೇವೆ ಎಂದರು. ಆದರೆ ಇದಕ್ಕೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದರು.

ಬಿಲ್ ಮಂಡಿಸಿದಾಗಲೇ ಆಕ್ಷೇಪಣೆ ಮಾಡಬೇಕಿತ್ತು. ಚರ್ಚೆ ಅರ್ಧ ನಡೆದ ನಂತರ ಆಕ್ಷೇಪಣೆ ಸಲ್ಲದು, ಮೊದಲೇ ಏಕೆ ಪಾಯಿಂಟ್ ಆಫ್ ಆರ್ಡರ್ ರೈಸ್ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಮಧ್ಯದಲ್ಲಿ ಆಕ್ಷೇಪಣೆ ಮಾಡಬಾರದು ಎನ್ನುವುದೇನಿಲ್ಲ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಕಂದಾಯ ಸಚಿವ ಆರ್.ಅಶೋಕ್, ಅಡ್ವಕೇಟ್ ಜನರಲ್ ಜೊತೆ, ತಜ್ಞರ ಜೊತೆ ಚರ್ಚಿಸಿಯೇ ಬಿಲ್ ತರಲಾಗಿದೆ. ಯಾವುದೇ ತೊಂದರೆ ಇಲ್ಲ. ವಿಧಾನಸಭೆಯಲ್ಲಿ ಎರಡು ದಿನ ಚರ್ಚೆ ಆಗಿದೆ. ಇಲ್ಲಿ ಬಂದಾಗ ಕಲಾಪ ಮುಂದೂಡಿಕೆಯಾಯ್ತು. ನಿನ್ನೆಯೂ ಬಂತು. ಆದರೆ ಚರ್ಚೆ ಬಿಟ್ಟು ಹೊರಟುಬಿಟ್ಟಿರಿ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News