ಅವೈಜ್ಞಾನಿಕವಾಗಿ ಜಿಎಸ್‍ಟಿ ಅನುಷ್ಠಾನದಿಂದ ಆರ್ಥಿಕ ಸಂಕಷ್ಟ: ಸಿದ್ದರಾಮಯ್ಯ
ಬೆಂಗಳೂರು, ಡಿ.8: ಕೇಂದ್ರ ಸರಕಾರವು ಅವೈಜ್ಞಾನಿಕವಾಗಿ ಜಿಎಸ್‍ಟಿಯನ್ನು ಅನುಷ್ಠಾನಗೊಳಿಸಿರುವುದರಿಂದ ದೇಶ ಹಾಗೂ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆರೋಪಿಸಿದರು.
ಜಿಎಸ್‍ಟಿ ನಿಮ್ಮದೆ ಕೂಸು. ದೇಶದಲ್ಲಿ ಜಿಎಸ್‍ಟಿ ತರಲು ಹೊರಟವರು ನೀವು. ಈಗ ಜಿಎಸ್‍ಟಿಯಿಂದ ಸಮಸ್ಯೆ ಆಗುತ್ತಿದೆ ಎಂದು ಆರೋಪಿಸುತ್ತಿರುವುದು ನೀವೇ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಟೀಕಿಸಿದಾಗ, ಸಿದ್ದರಾಮಯ್ಯ ಹಾಗೂ ಅವರ ನಡುವೆ ವಾಗ್ವಾದ ನಡೆಯಿತು.
ಜಿಎಸ್‍ಟಿಯನ್ನು ತರಲು ಮುಂದಾಗಿದ್ದು ನಾವೆ. ಆದರೆ, ಅದನ್ನು ಅನುಷ್ಠಾನ ಮಾಡಿದ್ದು ನೀವು. ಅವೈಜ್ಞಾನಿಕವಾಗಿ ನೀವು ಜಿಎಸ್‍ಟಿ ಅನುಷ್ಠಾನ ಮಾಡಿದ್ದರಿಂದ ಆರ್ಥಿಕವಾಗಿ ಸಮಸ್ಯೆಗಳು ಎದುರಾಗಿವೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಯಾಕೆ ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಕೋವಿಡ್‍ನಿಂದ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಲು ರಾಜ್ಯ ಸರಕಾರಗಳಿಗೆ ಸಾಲ ತೆಗೆದುಕೊಳ್ಳಿ, ನಾವು ಭದ್ರತೆ ಕೊಡುತ್ತೇವೆ ಎಂದು ಕೇಂದ್ರ ಸರಕಾರ ಹೇಳುತ್ತೆ. ರಾಜ್ಯ ಸರಕಾರಗಳಿಗೆ ಸಾಲ ಮಾಡಲು ಯಾಕೆ ಹೇಳುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಕೇಂದ್ರ ಸರಕಾರವೆ ಸಾಲ ಪಡೆದು ರಾಜ್ಯಗಳಿಗೆ ಹಂಚಬಹುದಲ್ಲವೇ? ಎಂದು ಅವರು ಹೇಳಿದರು.
ಜಿಎಸ್‍ಟಿ ಸೆಸ್‍ನಿಂದ ಸಾಲವನ್ನು ಭರಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ, ಸೆಸ್ ಅನ್ನು ಯಾವಾಗ ಬೇಕಾದರೂ ತೆಗೆದು ಹಾಕಬಹುದು. ಅದಕ್ಕಾಗಿ ಸಂಸತ್ತಿನ ಅನುಮೋದನೆ ಪಡೆಯುವ ಅಗತ್ಯವಿಲ್ಲ. ಜಿಎಸ್‍ಟಿ ಕೌನ್ಸಿಲ್‍ನಲ್ಲೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ಆದುದರಿಂದ, ಕೋವಿಡ್ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ತೆರಿಗೆ ವಸೂಲಿಯಲ್ಲಿ ಆಗಿರುವ ಕೊರತೆಯನ್ನು ಭರಿಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಕಾಂಗ್ರೆಸ್ ಸದಸ್ಯ ಕೃಷ್ಣಭೈರೇಗೌಡ ಮಾತನಾಡಿ, ಜಿಎಸ್‍ಟಿ ಜಾರಿ ಮಾಡಲು ಬಯಸಿದ್ದು ನಾವೇ. ಆದರೆ, ಸಂವಿಧಾನಕ್ಕೆ ತಿದ್ದುಪಡಿ ಹಾಗೂ ಜಿಎಸ್‍ಟಿ ಕಾನೂನು ರಚನೆಯಾಗಿದ್ದು 2016ರ ನಂತರ ಎನ್‍ಡಿಎ ಸರಕಾರದ ಅವಧಿಯಲ್ಲಿ. ರಾಜ್ಯ ಸರಕಾರ ಈಗ ಜಿಎಸ್‍ಟಿ ಪರಿಹಾರ ರೂಪವಾಗಿ 11,500 ಕೋಟಿ ರೂ.ಪಡೆಯುವುದಾಗಿ ಹೇಳಿದೆ. ಆದರೆ, ಮುಂದಿನ ಎರಡು ಮೂರು ವರ್ಷಗಳಲ್ಲಿ ನಮ್ಮ ರಾಜ್ಯಕ್ಕೆ 25 ರಿಂದ 27 ಸಾವಿರ ಕೋಟಿ ರೂ.ಜಿಎಸ್‍ಟಿ ಪರಿಹಾರ ಕೊರತೆ ಎದುರಾಗಬಹುದು ಎಂದರು.
ಜಿಎಸ್‍ಟಿ ಅಡಿಯಲ್ಲಿ ಸೆಸ್ ಅನ್ನು ಪರಿಹಾರ ಕೊಡಲು ರೂಪಿಸಿಲ್ಲ. ಅದು ಇದ್ದೇ ಇರುತ್ತದೆ. ತಂಬಾಕು ಉತ್ಪನ್ನಗಳು, ಐಷಾರಾಮಿ ವಾಹನಗಳ ಮೇಲೂ ಸೆಸ್ ಹಾಕುತ್ತೇವೆ. 2022ಕ್ಕೆ ರಾಜ್ಯಗಳಿಗೆ ಬರುವ ಜಿಎಸ್‍ಟಿ ಪರಿಹಾರ ನಿಂತು ಹೋಗುತ್ತದೆ. ರಾಜ್ಯಕ್ಕೆ ಬರಬೇಕಿರುವ 8-9 ಸಾವಿರ ಕೋಟಿ ರೂ.ಜಿಎಸ್‍ಟಿ ಆದಾಯವು ಕೈ ತಪ್ಪಬಹುದು. ಆದುದರಿಂದ, ಜಿಎಸ್‍ಟಿ ಪರಿಹಾರವನ್ನು ನೀಡುವ ಅವಧಿಯನ್ನು 2025ರವರೆಗೆ ಮುಂದುವರಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸೆಸ್‍ಗಳನ್ನು ಹಾಕಬೇಕು ಎಂಬುದನ್ನು ಸಂವಿಧಾನದ ತಿದ್ದುಪಡಿಯಲ್ಲಿಯೆ ಸೇರಿಸಲಾಗಿದೆ. ರಾಜ್ಯಗಳು ಪಡೆದಿರುವ ಸಾಲ ತೀರುವವರೆಗೂ ಜಿಎಸ್‍ಟಿ ಪರಿಹಾರವನ್ನು ಮುಂದುವರಿಸುವಂತೆ ಜಿಎಸ್‍ಟಿ ಕೌನ್ಸಿಲ್‍ನಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಕೇಂದ್ರ ಸರಕಾರವು ಪರಿಹಾರ ನೀಡುವ ಅವಧಿಯನ್ನು ವಿಸ್ತರಣೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.