×
Ad

ಭೂ ಸುದಾರಣೆ ಕಾಯ್ದೆ ತಿದ್ದುಪಡಿಗೆ ಅಂಗೀಕಾರ ವಿರೋಧಿಸಿ ಪ್ರತಿಭಟನೆ: 70ಕ್ಕೂ ಅಧಿಕ ರೈತ ಮುಖಂಡರ ಬಂಧನ

Update: 2020-12-08 20:16 IST

ಬೆಂಗಳೂರು, ಡಿ.8: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರ ವಿರೋಧಿಸಿ ಹಾಗೂ ಇದಕ್ಕೆ ಬೆಂಬಲ ಘೋಷಿಸಿದ ಜೆಡಿಎಸ್ ನಡೆ ಖಂಡಿಸಿ ರಸ್ತೆ ತಡೆ ನಡೆಸಿದ 70ಕ್ಕೂ ಅಧಿಕ ರೈತ ಮುಖಂಡರನ್ನು ಪೊಲೀಸರು ಬಂಧಿಸಿದರು.

ಮಂಗಳವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಕೇಂದ್ರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು, ವಿಧಾನ ಪರಿಷತ್‍ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಪರ ಜೆಡಿಎಸ್ ಸದಸ್ಯರು ಮತ ಹಾಕಿದ ಸುದ್ದಿ ತಿಳಿಯುತ್ತಿದ್ದಂತೆ ಏಕಾಏಕಿ ರಸ್ತೆಗಿಳಿದು ಹೋರಾಟ ಆರಂಭಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಬಸ್ಸಿನಲ್ಲಿ ಕರೆದೊಯ್ದುರು.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಪ್ರಕಾರ ಒಬ್ಬರು 450 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಬಹುದು. ಇಂತಹ ಕರಾಳ ತಿದ್ದುಪಡಿ ತರಲು ಕಾರ್ಪೋರೇಟ್ ಬಂಡವಾಳಶಾಹಿಗಳ ಪರವಾಗಿ ಬಿಜೆಪಿ ಮುಂದಾಗಿದೆ. ಇವರ ಜೊತೆಗೆ ಜೆಡಿಎಸ್ ಕೂಡ ಶಾಮೀಲಾಗಿ ಮಸೂದೆ ಪರ ಮತ ಹಾಕಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜೆಡಿಎಸ್ ಈಗ ಬಿಜೆಪಿ ಪರ ನಿಂತಿದೆ. ರೈತರ ಪರ ಎಂದು ಹೇಳಿಕೊಳ್ಳಲು ಆ ಪಕ್ಷಕ್ಕೆ ಈಗ ಯಾವುದೇ ನೈತಿಕತೆ ಇಲ್ಲ. ಅಲ್ಲದೆ, ಈ ಹಿಂದೆಯೂ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ವಿಧಾನ ಪರಿಷತ್ತಿನಲ್ಲಿ ಮಸೂದೆ ಅಂಗೀಕಾರ ಆಗದಂತೆ ಕಾಂಗ್ರೆಸ್ ಜತೆ ಸೇರಿ ಹೋರಾಟ ನಡೆಸಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಇದೀಗ ಮಾತಿಗೆ ತಪ್ಪಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಪಾಠ ಕಲಿಸುವುದಾಗಿ ರೈತ ಮುಖಂಡರು ವಾಗ್ದಾಳಿ ನಡೆಸಿದರು.

ಕೃಷಿ ತಜ್ಞ ಡಾ.ಪ್ರಕಾಶ್ ಕಮ್ಮರಡಿ, ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರಗೋಡು, ಗಾಯತ್ರಿ, ಮಲ್ಲಿಗೆ, ಕಾಳಪ್ಪ, ಅವನಿ ಚೋಕ್ಷಿ, ಸರೋವರ್, ವರದರಾಜೇಂದ್ರ ಸೇರಿ ಹಲವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು ಎಂದು ರೈತ ಮುಖಂಡರೊಬ್ಬರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News