‘ನಾವು ನೇಣಿಗೇರಬೇಕೆಂಬುದು ಸರಕಾರದ ಉದ್ದೇಶವೇ?': ಶಾಸಕ ಶಿವಲಿಂಗೇಗೌಡ ಪ್ರಶ್ನೆ

Update: 2020-12-08 15:11 GMT

ಬೆಂಗಳೂರು, ಡಿ. 8: ‘ಭೂ ಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ನಮ್ಮನ್ನು ನೇಣಿಗೆ ಹಾಕುವ ರೀತಿಯಲ್ಲಿ ಆಕ್ರೋಶಿತರಾಗಿದ್ದಾರೆ. ನಾವು ನೇಣಿಗೇರಬೇಕು ಎಂಬುದು ಸರಕಾರದ ಉದ್ದೇಶವೇ?' ಎಂದು ಜೆಡಿಎಸ್ ಹಿರಿಯ ಸದಸ್ಯ ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ರಾಯಭಾಗ ಕ್ಷೇತ್ರದ ಶಾಸಕ ಐಹೋಳೆ ಮಹಾಲಿಂಗಪ್ಪ ಕೇಳಿದ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೀಡಿದ ಉತ್ತರಿಂದ ಆಕ್ರೋಶತರಾದ ಶಿವಲಿಂಗೇಗೌಡ, ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ಸರಕಾರ, ಭೂ ಸ್ವಾಧೀನಕ್ಕೆ ಸೂಕ್ತ ರೀತಿಯಲ್ಲಿ ಹಣ ಬಿಡುಗಡೆ ಮಾಡದೆ ವಿಳಂಬ ಧೋರಣೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಟೀಕಿಸಿದರು.

ಇದರಿಂದ ಕೆರಳಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಹೇಮಾವತಿ ನಾಲಾ ಯೋಜನೆಗೆ 25 ವರ್ಷಗಳು ಕಳೆದರೂ ರೈತರಿಗೆ ಪರಿಹಾರ ನೀಡಿಲ್ಲ. ನೀವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೆಣಕಿದರು. ಇದರಿಂದ ಮಾಧುಸ್ವಾಮಿ ಮತ್ತು ಶಿವಲಿಂಗೇಗೌಡ ಮಧ್ಯೆ ಏರಿದ ಧ್ವನಿಯಲ್ಲಿ ಕೆಲಕಾಲ ವಾಗ್ವಾದವು ನಡೆಯಿತು.

ಬಳಿಕ ಉತ್ತರಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಎತ್ತಿನಹೊಳೆ ಸೇರಿದಂತೆ ಎಲ್ಲ ನೀರಾವರಿ ಯೋಜನೆಗಳ ಭೂಸ್ವಾಧೀನ ಸಮಸ್ಯೆ ಪರಿಹಾರಕ್ಕೆ ಸರಕಾರ ಕ್ರಮ ವಹಿಸಲಿದೆ ಎಂದರು. ಬೆಳಗಾವಿ ಜಿಲ್ಲೆ ರಾಯಭಾಗ ಕ್ಷೇತ್ರದ ಚಿಕ್ಕೋಡಿ ತಾಲೂಕಿನ ಕರಗಾಂವ ಏತ ನೀರಾವರಿ ಯೋಜನೆಗೆ ಮಂಜೂರಾತಿ ಪರಿಶೀಲನೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News