×
Ad

ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ರಾಜ್ಯಾದ್ಯಂತ ಪ್ರವಾಸ: ಸಚಿವ ಬಿ.ಸಿ.ಪಾಟೀಲ್

Update: 2020-12-09 12:59 IST

ಬೆಂಗಳೂರು, ಡಿ.9: ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಅಧಿವೇಶನ ಮುಗಿದ ಬಳಿಕ ಪಶು ಸಂಗೋಪನೆ, ಸಹಕಾರಿ, ಕಂದಾಯ ಸಚಿವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಆ ಮೂಲಕ ರೈತರ ಕಾಯ್ದೆ ತಿದ್ದುಪಡಿಯಿಂದಾಗುವ ಅನುಕೂಲತೆ ಬಗ್ಗೆ ರೈತರಲ್ಲಿ ಮನವರಿಕೆ ಮಾಡಿಕೊಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬಾರುಕೋಲು ಹಿಡಿದು ಚಳವಳಿ ಮಾಡುವಂಥದ್ದೇನೂ ಆಗಿಲ್ಲ. ದೇಶ ಹಾಗೂ ರಾಜ್ಯದ ರೈತರ ಅನುಕೂಲಕ್ಕಾಗಿಯೇ ಕಾಯ್ದೆ ತರಲಾಗಿದೆ ಎಂದರು.

ಕಾಂಗ್ರೆಸ್ 2019ರ ಪ್ರಣಾಳಿಕೆಯಲ್ಲಿ ಎಪಿಎಂಸಿ ರದ್ದು ಮಾಡಿ ಮುಕ್ತ ಮಾರುಕಟ್ಟೆ ಮಾಡುವ ಬಗ್ಗೆ ನೀಡಿದ ಭರವಸೆ ನೀಡಿತ್ತು. ನಮ್ಮ ಸರಕಾರ ಅವರು ಹೇಳಿದ್ದನ್ನೇ ಮಾಡಿದೆ. ಇದಕ್ಕೆ ಕಾಂಗ್ರೆಸ್‌ನವರು ಮೆಚ್ಚುಗೆ ವ್ಯಕ್ತಪಡಿಸಬೇಕೇ ಹೊರತು ರಾಜಕೀಯಕ್ಕಾಗಿ ವಿರೋಧಿಸುವುದಲ್ಲ ಎಂದರು.
 ಸಿದ್ದರಾಮಯ್ಯ ಸಹ ಹಿಂದೆ ಕಾಯ್ದೆ ತಿದ್ದುಪಡಿಗಾಗಿ ಪತ್ರ ಬರೆದಿದ್ದರು. ಹೂವುಹಣ್ಣು ತರಕಾರಿಗಳನ್ನು ಎಪಿಎಂಸಿಯಿಂದ ಹೊರಗಿಡಬೇಕು. ಇದರಿಂದ ರೈತರ ಶೋಷಣೆಯಾಗುತ್ತಿದೆ ಎಂದಿದ್ದರು. ರೈತರು ಬುದ್ಧಿವಂತರಿದ್ದಾರೆ. ಅವರಿಗೆ ಸರಿತಪ್ಪುಗಳ ಬಗ್ಗೆ ಅರಿವಿದೆ. ತಾವು ನಡೆಸಿದ ಪ್ರವಾಸದಲ್ಲಿ ಎಲ್ಲಿಯೂ ರೈತರೂ ಈ ಕಾಯ್ದೆಗಳನ್ನು ವಿರೋಧಿಸಿಲ್ಲ. ವಿನಾಕಾರಣ ರಾಜಕೀಯಕ್ಕಾಗಿ ಕಾಂಗ್ರೆಸ್ ಸುಮ್ಮನೆ ಆರೋಪಿಸುವುದು ಸರಿಯಲ್ಲ ಎಂದರು.

ಈಗಾಗಲೇ ಒಂದು ಸಾರಿ ಪ್ರವಾಸ ಮಾಡಿದ್ದೇವೆ. ಆದರೆ ಎಲ್ಲಿಯೂ ಕೂಡ ಯಾವ ರೈತರಿಂದಲೂ ಕಾಯ್ದೆ ಬಗ್ಗೆ ಅಪಸ್ವರ ಬಂದಿಲ್ಲ. ವಿಧಾನಸಭೆ ಅಧಿವೇಶನ ನಡೆಯುವಾಗ ಇಂತಹ ಪ್ರತಿಭಟನೆ ಸಹಜ. ಇದರಿಂದ ಸಾರ್ವಜನಿಕರಿಗೆ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಯ್ದೆ ಬದಲಾವಣೆ ಇಲ್ಲ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರ ಈ ಬಗ್ಗೆ ಸ್ಪಷ್ಟಪಡಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News