ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಭವನ ಚಲೋ ನಡೆಸಿದ ಕರವೇ ಕಾರ್ಯಕರ್ತರು

Update: 2020-12-09 12:31 GMT

ಬೆಂಗಳೂರು, ಡಿ.9: ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಭವನ ಚಲೋ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ರೈತರಿಗೆ ಮಾರಕವಾಗಿರುವ ಕಾನೂನುಗಳನ್ನು ಹಿಂಪಡೆಯುವಂತೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಬುಧವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಿಂದ ರಾಜಭವನ ಕಡೆ ಮೆರವಣಿಗೆ ಸಾಗಿದ ಕರವೇ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕೆಂದು ಒತ್ತಾಯ ಮಾಡಿದರು.

ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ನೂತನ ಕೃಷಿ ಕಾಯ್ದೆಗಳು ರೈತರಿಗೆ ಮರಣಶಾಸನವಾಗಿದ್ದು, ಈ ಕಾನೂನುಗಳನ್ನು ವಾಪಸ್ ಪಡೆಯದಿದ್ದರೆ ರೈತರ ಆತ್ಮಹತ್ಯೆಗಳು ದುಪ್ಪಟ್ಟಾಗಲಿವೆ. ಇದು ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟ. ಇಡೀ ದೇಶದ ಜನರು ಅನ್ನದಾತನ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ಈ ಚಳವಳಿಯಲ್ಲಿ ಪಾಲ್ಗೊಂಡಿರುವ ನೂರಾರು ರೈತ ಸಂಘಟನೆಗಳು ಇಟ್ಟಿರುವ ಬೇಡಿಕೆಗಳು ನ್ಯಾಯಯುತವಾಗಿವೆ ಎಂದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲಿ ಪ್ರತಿಸ್ಪರ್ಧಿಯಾಗಿ ಖಾಸಗಿ ಮಂಡಿಗಳಿಗೆ ಅವಕಾಶ ನೀಡಲಾಗಿದ್ದು, ಇದರಿಂದಾಗಿ ಎಪಿಎಂಸಿಗಳು ನಿಧಾನವಾಗಿ ನಾಶವಾಗುತ್ತವೆ. ಖಾಸಗಿ ಕಂಪೆನಿಗಳ ಕೈಗೆ ಕೃಷಿ ಮಾರುಕಟ್ಟೆ ಹೋಗುತ್ತದೆ. ಅದೇ ರೀತಿ, ರೈತರನ್ನು ಉಳಿಸಿರುವುದೇ ಬೆಂಬಲ ಬೆಲೆ. ಆದರೆ, ಮುಂದೆ ಬೆಂಬಲ ಬೆಲೆ ಇಲ್ಲದಂತಾಗಿ ರೈತನ ಬದುಕು ನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಕಾನೂನಿನಿಂದಾಗಿ ರೈತನ ಬೆಳೆಗೆ ಬೆಲೆಯನ್ನು ಖಾಸಗಿ ಸಂಸ್ಥೆಗಳೇ ನಿಗದಿ ಮಾಡುತ್ತವೆ. ರೈತನಿಗೆ ಮೊದಲು ಒಳ್ಳೆಯ ಬೆಲೆ ಸಿಗಬಹುದು. ಆಮೇಲೆ ಖಾಸಗಿ ಸಂಸ್ಥೆಗಳು ಹೇಳಿದ್ದೇ ಬೆಲೆ ಎಂದ ಅವರು, ಕಾಂಟ್ರಾಕ್ಟ್ ಫಾರ್ಮಿಂಗ್(ಕೃಷಿ ಗುತ್ತಿಗೆ) ಕಾನೂನು ಸಹ ಉದ್ಯಮಿಗಳಾದ ಅಂಬಾನಿ, ಅದಾನಿಯಂಥವರ ದೊಡ್ಡ ಕಂಪೆನಿಗಳು ರೈತರ ಜತೆ ಒಪ್ಪಂದ ಮಾಡಿಕೊಂಡು ಬೆಳೆಯಿಂದ ಹಿಡಿದು ಗುಣಮಟ್ಟದವರೆಗೆ ಎಲ್ಲವನ್ನೂ ಖಾಸಗಿ ಸಂಸ್ಥೆಗಳೇ ತೀರ್ಮಾನಿಸುತ್ತವೆ ಎಂದರು.

ಇನ್ನು, ಖಾಸಗಿ ಕಂಪೆನಿಗಳ ವಿರುದ್ಧ ದೂರು ಕೊಡುವ ಅವಕಾಶ ರೈತನಿಗಿದೆ. ಆದರೆ ವ್ಯಾಜ್ಯ ತೀರ್ಮಾನ ಆಗುವವರೆಗೆ ಬೆಳೆಯನ್ನು ಬೇರೆಯವರಿಗೆ ಮಾರುವಂತಿಲ್ಲ. ಬೆಳೆ ಹಾಳಾಗದಂತೆ ಕಾಪಾಡಿಕೊಳ್ಳುವ ಹೊಣೆಯೂ ರೈತನದು ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News