ಬಾರುಕೋಲು ಹಿಡಿದು ರೈತರಿಂದ ವಿಧಾನಸೌಧ ಮುತ್ತಿಗೆ ಯತ್ನ: ಪೊಲೀಸರಿಂದ ತಡೆ

Update: 2020-12-09 12:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.9: ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳು ಹಾಗೂ ಭೂಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿ ರೈತರು ತಮ್ಮ ಕೈಗಳಲ್ಲಿ ಬಾರುಕೋಲು ಹಿಡಿದು ವಿಧಾನಸೌಧ ಮುತ್ತಿಗೆ ಚಳುವಳಿ ನಡೆಸಿ, ಆಕ್ರೋಶ ಹೊರಹಾಕಿದರು.

ಬುಧವಾರ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ರೈತರು, ತದನಂತರ ಅಲ್ಲಿಂದ ವಿಧಾನಸೌಧ ಮುತ್ತಿಗೆಗೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು, ಪ್ರತಿಭಟನಾಕಾರರನ್ನು ಫ್ರೀಂಡ ಪಾರ್ಕ್ ಬಳಿಯೇ ತಡೆದರು.

ರೈತ ಮತ್ತು ಕಾರ್ಮಿಕ ವಿರೋಧಿಯಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ತಿದ್ದುಪಡಿ ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಕೃಷಿ ಕಾಯ್ದೆ ತಿದ್ದುಪಡಿ ಕಾಯ್ದೆಗಳು ಹಣವಂತರು ಹಾಗೂ ಕಾರ್ಪೋರೆಟ್‍ಗಳಿಗೆ ಅನುಕೂಲವಾಗಿ ರೈತರಿಗೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯುತ್ ಕ್ಷೇತ್ರದಲ್ಲೂ ಖಾಸಗೀಕರಣ ನಡೆದಿದೆ. ಕೇಂದ್ರ ಸರಕಾರ ಇಡೀ ದೇಶವನ್ನೇ ಖಾಸಗೀಕರಣ ಮಾಡಲು ಹೊರಟು ಜನರನ್ನು ಗುಲಾಮಗಿರಿಗೆ ತಳ್ಳುತ್ತಿದೆ. ಕಾರ್ಮಿಕ ಕಾಯ್ದೆ ಸಹ ಕಾರ್ಮಿಕರ ವಿರೋಧವಾಗಿದೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿರುವುದು ರೈತರನ್ನು ಬೀದಿ ಪಾಲು ಮಾಡುವ ಯತ್ನವಾಗಿದೆ ಎಂದು ರೈತರು ದೂರಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತರ ಪ್ರಮುಖ ಅಸ್ತ್ರ ಬಾರುಕೋಲು ಝಳಪಿಸುವ ಮೂಲಕ ಮಾರಕ ಕೃಷಿ ಕಾಯ್ದೆಗಳನ್ನು ತರಲು ಹೊರಟಿರುವ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದು, ರೈತರ ಸಂಕಷ್ಟಕ್ಕೆ ಸಿಲುಕಿಸಿರುವ ಭೂಸುಧಾರಣಾ ಕಾಯ್ದೆಯನ್ನು  ಕೂಡಲೇ ಹಿಂಪಡೆಯಬೇಕೆಂದು ಒತ್ತಾಯ ಮಾಡಿದರು.

ಬಿಗಿ ಪೊಲೀಸ್ ಭದ್ರತೆ: ರೈತರ-ವಿವಿಧ ಸಂಘ ಸಂಸ್ಥೆಗಳ ಪ್ರತಿಭಟನೆ ಹಿನ್ನೆಲೆ ನಗರದೆಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಮುಖ್ಯವಾಗಿ ವಿಧಾನಸೌಧ, ಮುಖ್ಯಮಂತ್ರಿಗಳ ಕಾವೇರಿ ನಿವಾಸ, ಫ್ರೀಡಂ ಪಾರ್ಕ್, ಮೌರ್ಯ ವೃತ್ತ, ಮೈಸೂರು ಬ್ಯಾಂಕ್, ಬಿಬಿಎಂಪಿ, ಟೌನ್ ಹಾಲ್ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಅನ್ನು ನಿಯೋಜಿಸಲಾಗಿತ್ತು.

ಸಂಚಾರ ದಟ್ಟಣೆ: ರೈತರ ಮುಖಂಡರ ಪ್ರತಿಭಟನೆ ಹಿನ್ನೆಲೆ ಹಲವು ರಸ್ತೆ ಮಾರ್ಗಗಳ ಸಂಚಾರವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿಯದೆ, ರಸ್ತೆಗಿಳಿದ ವಾಹನ ಸವಾರರು, ಪರದಾಡಿದ ದೃಶ್ಯಗಳು ಕಂಡುಬಂದವು. ಇನ್ನು, ಹಲವು ಕಡೆ ಸಾಲು ಸಾಲಾಗಿ ವಾಹನಗಳು ನಿಂತಿದ್ದವು.

ಶಾಲು ತೆಗೆಯಿರಿ

ರೈತರ ವಿಧಾನಸೌಧ ಮುತ್ತಿಗೆ ಚಳುವಳಿ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ಶಾಲು ತೆಗೆಯಿರಿ, ಬಾರುಕೋಲು ತೆಗೆಯಿರಿ ಎಂದು ಪೊಲೀಸ್ ಸಿಬ್ಬಂದಿ ಹೇಳಿದ ಕಾರಣಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ, ಶಾಲು ತೆಗೆಯಿರಿ ಎನ್ನಲು ನೀವು ಯಾರು ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News