ಕೊರೋನ ಲಸಿಕೆ ಖರೀದಿಸಲು ಅಭಿವೃದ್ಧಿಶೀಲ ದೇಶಗಳಿಗೆ ನೆರವು: ಏಶ್ಯನ್ ಡೆವೆಲಪ್‌ಮೆಂಟ್ ಬ್ಯಾಂಕ್

Update: 2020-12-11 17:12 GMT

ಸಿಂಗಾಪುರ, ಡಿ. 11: ಕೋವಿಡ್-19 ಲಸಿಕೆಗಳನ್ನು ಖರೀದಿಸಿ ವಿತರಣೆ ಮಾಡಲು ತನ್ನ ಅಭಿವೃದ್ಧಿಶೀಲ ಸದಸ್ಯರಿಗೆ ನೆರವಾಗುವುದಕ್ಕಾಗಿ 9 ಬಿಲಿಯ ಡಾಲರ್ (ಸುಮಾರು 66,400 ಕೋಟಿ ರೂಪಾಯಿ) ವೆಚ್ಚದಲ್ಲಿ ಲಸಿಕಾ ಯೋಜನೆಯೊಂದನ್ನು ಆರಂಭಿಸಿರುವುದಾಗಿ ಏಶ್ಯನ್ ಡೆವೆಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಶುಕ್ರವಾರ ತಿಳಿಸಿದೆ.

ಏಶ್ಯ ಪೆಸಿಫಿಕ್ ವ್ಯಾಕ್ಸಿನ್ ಎಕ್ಸೆಸ್ ಫೆಸಿಲಿಟಿ (ಎಪಿವಿಎಎಕ್ಸ್) ಎಂಬ ಲಸಿಕಾ ಕಾರ್ಯಕ್ರಮವನ್ನು ಎಡಿಬಿ ಆರಂಭಿಸಿದೆ. ಇದು ಪರಿಣಾಮಕಾರಿ ಹಾಗೂ ಸುರಕ್ಷಿತ ಕೊರೋನ ವೈರಸ್ ಲಸಿಕೆಯನ್ನು ಖರೀದಿಸಿ ತಮ್ಮ ಪ್ರಜೆಗಳಿಗೆ ವಿತರಿಸಲು ಅಭಿವೃದ್ಧಿಶೀಲ ಸದಸ್ಯರಿಗೆ ಕ್ಷಿಪ್ರ ನೆರವನ್ನು ನೀಡುವುದು ಎಂದು ಏಶ್ಯನ್ ಡೆವೆಲಪ್‌ಮೆಂಟ್ ಬ್ಯಾಂಕ್ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.

‘‘ಎಡಿಬಿಯ ಅಭಿವೃದ್ಧಿಶೀಲ ಸದಸ್ಯರು ತಮ್ಮ ಪ್ರಜೆಗಳಿಗೆ ಸಾಧ್ಯವಾದಷ್ಟು ಬೇಗ ಲಸಿಕೆ ನೀಡಲು ಸಿದ್ಧತೆಗಳನ್ನು ನಡೆಸುತ್ತಿರುವಂತೆಯೇ, ಲಸಿಕೆಗಳನ್ನು ಪಡೆಯಲು ಅವರಿಗೆ ಹಣಕಾಸಿನ ಅಗತ್ಯವಿದೆ. ಅದೂ ಅಲ್ಲದೆ, ಲಸಿಕಾ ಕಾರ್ಯಕ್ರಮವನ್ನು ಸೂಕ್ತ ಹಾಗೂ ಸುರಕ್ಷಿತ ರೀತಿಯಲ್ಲಿ ನಿಭಾಯಿಸುವುದಕ್ಕಾಗಿ ಅವರಿಗೆ ಸೂಕ್ತ ಕಾರ್ಯಕ್ರಮವೊಂದರ ಅಗತ್ಯವಿದೆ’’ ಎಂದು ಎಡಿಬಿ ಅಧ್ಯಕ್ಷ ಮಸಟ್ಸುಗು ಅಸಕವ ಹೇಳಿದರು.

‘‘ನಮ್ಮ ಅಭಿವೃದ್ಧಿಶೀಲ ಸದಸ್ಯರು ಈ ಸವಾಲುಗಳನ್ನು ಸೂಕ್ತರೀತಿಯಲ್ಲಿ ನಿಭಾಯಿಸಲು, ಸಾಂಕ್ರಾಮಿಕವನ್ನು ಜಯಿಸಲು ಹಾಗೂ ಆರ್ಥಿಕ ಚೇತರಿಕೆಗೆ ಒತ್ತು ನೀಡಲು ಸಾಧ್ಯವಾಗುವಂತೆ ಅವರಿಗೆ ಎಪಿವಿಎಎಕ್ಸ್ ಸೂಕ್ತ ಬೆಂಬಲವನ್ನು ನೀಡುವುದು’’ ಎಂದರು.

ಏಶ್ಯ ಮತ್ತು ಪೆಸಿಫಿಕ್‌ನಲ್ಲಿ 1.43 ಕೋಟಿ ಜನರು ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಈ ಪೈಕಿ 2 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News