ಯುಎಇನಲ್ಲಿ ಸಿನೋಫಾರ್ಮ್ ಲಸಿಕೆ ನೀಡಿಕೆ ಆರಂಭ

Update: 2020-12-13 17:50 GMT

ಅಬುಧಾಬಿ,ಡಿ.13: ಯುಎಇನಲ್ಲಿ ಸಿನೋಫಾರ್ಮ್ ಕೋವಿಡ್-19 ಲಸಿಕೆ ಕಾರ್ಯಕ್ರಮವು ಶನಿವಾರ ಆರಂಭಗೊಂಡಿದ್ದು, ದೇಶವು ಈ ಮಾರಕ ಸೋಂಕು ರೋಗವನ್ನು ನಿರ್ಮೂಲನೆಗೊಳಿಸುವತ್ತ ಸಾಗುತ್ತಿದೆ ಎಂದು ದೇಶದ ವೈದ್ಯಕೀಯ ತಜ್ಞರು ಭರವಸೆ ವ್ಯಕ್ತಪಡಿಸಿದ್ದಾರೆ.

  ಸಾಮೂಹಿಕ ಲಸಿಕೆ ಅಭಿಯಾನವು ಯುಎಇ ಸಹಜತೆಯೆಡೆಗೆ ಮರಳುವುದನ್ನು ತ್ವರಿತಗೊಳಿಸಲಿದೆ ಎಂದು ಅಬುಧಾಬಿಯ ಬುರ್ಜೀಲ್ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ತಂಡದ ಸದಸ್ಯೆ ಡಾ. ಹೈಫಾ ನೌರಿನ್ ತಿಳಿಸಿದ್ದಾರೆ.

ಸಿನೋಫಾರ್ಮ್ ಲಸಿಕೆಯು ಶೇ.86ರಷ್ಟು ಪರಿಣಾಮಕಾರಿಯಾಗಿದ್ದು, ಕೋವಿಡ್-19 ರೋಗವನ್ನು ಮೂಲೋತ್ಪಾಟನೆ ಮಾಡಲು ಉತ್ತಮ ಅವಕಾಶ ಲಭಿಸಿದೆ ಎಂದವರು ಹೇಳಿದ್ದಾರೆ. ಅಬುಧಾಬಿಯಲ್ಲಿರುವ ವಿಪಿಎಸ್ ಹೆಲ್ತ್‌ಕೇರ್‌ನ ಉಸ್ತುವಾರಿಯಲ್ಲಿರುವ ಎಲ್ಲಾ 18 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಅಲ್ಲಿಗೆ ದಿನವಿಡೀ ಜನರು ಗಣನೀಯ ಸಂಖ್ಯೆಯಲ್ಲಿ ಹರಿದುಬರುತ್ತಿರುವುದು ಕಂಡುಬಂತು.

 ಮುಂದಿನ ದಿನಗಳಲ್ಲಿ ಇನ್ನೂ ಅಧಿಕ ಸಂಖ್ಯೆಯಲ್ಲಿ ಜನರು ಲಸಿಕೆಗಾಗಿ ಆಸ್ಪತ್ರೆಗಳಿಗೆ ಬರುವ ನಿರೀಕ್ಷೆಯಿದೆ. ಈ ಸೋಂಕುರೋಗವನ್ನು ನಿಯಂತ್ರಿಸುವಲ್ಲಿ ಯುಎಇನ ಆರೋಗ್ಯ ಇಲಾಖೆ ಹಾಗೂ ಅಬುಧಾಬಿಯ ಆರೋಗ್ಯಸೇವೆಗಳ ಸಂಸ್ಥೆ ಅದ್ಭುತವಾದ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಆಕೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News