ಉದ್ಯಮ, ಸಿಬ್ಬಂದಿಯನ್ನು ಕಾಪಾಡಿಕೊಳ್ಳಲು ಬಜರಂಗದಳದ ಕುರಿತು ಮೃದು ಧೋರಣೆ ತಾಳಿದ್ದ ಫೇಸ್ ಬುಕ್

Update: 2020-12-14 06:08 GMT

ಹೊಸದಿಲ್ಲಿ: ಬಜರಂಗದಳ ಒಂದು ಅಪಾಯಕಾರಿ ಸಂಘಟನೆಯಾಗಿದೆ ಎಂದು ಫೇಸ್ ಬುಕ್‍ ನ ಸುರಕ್ಷತಾ  ತಂಡ ಅಭಿಪ್ರಾಯಿಸಿದ ಹೊರತಾಗಿಯೂ ರಾಜಕೀಯ ಮತ್ತು ಸುರಕ್ಷತಾ ಕಾರಣಗಳಿಗಾಗಿ  ಫೇಸ್ ಬುಕ್ ‍ನಲ್ಲಿ ಸಕ್ರಿಯವಾಗಿರಲು ಸಂಘಟನೆಗೆ ಅನುಮತಿಸಲಾಗಿತ್ತು ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್  ರವಿವಾರ ವರದಿ ಮಾಡಿದೆ.

ಆಡಳಿತ ಪಕ್ಷ ಬಿಜೆಪಿ ಜತೆಗೆ ನಂಟು ಹೊಂದಿರುವ ಬಜರಂಗದಳದ ಮೇಲೆ ಕ್ರಮ ಕೈಗೊಂಡಿದ್ದೇ ಆದಲ್ಲಿ ಅದು ಭಾರತದಲ್ಲಿ ಸಂಸ್ಥೆಯ ಉದ್ಯಮ ಅವಕಾಶಗಳು ಹಾಗೂ ಅದರ ಸಿಬ್ಬಂದಿಗೆ ಸಮಸ್ಯೆಯೊಡ್ಡುವ ಸಾಧ್ಯತೆಯಿದೆಯೆಂದು ಅರಿತು ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಲು ಫೇಸ್ ಬುಕ್ ಹಿಂಜರಿದಿದೆ ಎಂದು ಪತ್ರಿಕೆ ವರದಿ ಮಾಡಿದೆ.

ದಿಲ್ಲಿಯ ಹೊರವಲಯದಲ್ಲಿರುವ ಚರ್ಚ್ ಒಂದರ ಮೇಲಿನ ದಾಳಿಗೆ ಬಜರಂಗದಳ ಹೊಣೆ ಹೊತ್ತುಕೊಂಡ ವೀಡಿಯೋಗೆ 2.5 ಲಕ್ಷ ವೀವ್ಸ್ ದೊರಕಿರುವುದನ್ನೂ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

“ಬಜರಂಗದಳಕ್ಕೆ ಫೇಸ್ ಬುಕ್‍ ನಲ್ಲಿ ನಿಷೇಧ ಹೇರಿದ್ದೇ ಆದಲ್ಲಿ ಅದು ಭಾರತದ ಆಡಳಿತ ಪಕ್ಷದ ಹಿಂದು ರಾಷ್ಟ್ರೀಯವಾದಿ ರಾಜಕಾರಣಿಗಳ ಆಕ್ರೋಶಕ್ಕೆ ಕಾರಣವಾಗಬಹುದು ಮತ್ತು ಭಾರತದಲ್ಲಿ ಫೇಸ್ ಬುಕ್ ಉದ್ಯೋಗಿಗಳು ಅಥವಾ ಅದರ ಕಚೇರಿಗಳ ಮೇಲೆ ದಾಳಿಗಳಿಗೂ ಕಾರಣವಾಗಬಹುದು,'' ಎಂದು ಫೇಸ್ ಬುಕ್‍ನ ಆಂತರಿಕ ವರದಿಯೊಂದು ಹೇಳಿತ್ತು ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.

ಈ ಲೇಖನಕ್ಕೆ ಪ್ರತಿಕ್ರಿಯಿಸಿರುವ ಫೇಸ್ ಬುಕ್ ವಕ್ತಾರೆ ಆ್ಯಂಡಿ ಸ್ಟೋನ್, “ನಾವು ಯಾವುದೇ ರಾಜಕೀಯ ನಿಲುವು ತಾಳದೆ ಹಾಗೂ ಯಾವುದೇ ರಾಜಕೀಯ ಪಕ್ಷದ ಪರ ವಹಿಸದೆ ನಮ್ಮ `ಅಪಾಯಕಾರಿ ವ್ಯಕ್ತಿಗಳು ಮತ್ತು ಸಂಘಟನೆಗಳು ನೀತಿಯನ್ನು' ಅನ್ವಯಿಸುತ್ತೇವೆ,” ಎಂದು  ಹೇಳಿದ್ದಾರೆ.

ಆಡಳಿತ ಪಕ್ಷ ಬಿಜೆಪಿ ಪರ ನಿಲುವನ್ನು ಫೇಸ್ ಬುಕ್ ಹೊಂದಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ಆಗಸ್ಟ್ ತಿಂಗಳಲ್ಲಿ ವರದಿ ಮಾಡಿತ್ತಲ್ಲದೆ,  ಫೇಸ್ ಬುಕ್ ಇಂಡಿಯಾದ ಮಾಜಿ ಅಧಿಕಾರಿ ಅಂಖಿ ದಾಸ್ ಅವರು ಮುಸ್ಲಿಂ ವಿರೋಧಿ ಕಮೆಂಟ್ ಮಾಡಿದ ಆಡಳಿತ ಪಕ್ಷದ ನಾಯಕರೊಬ್ಬರ ಪರ ಲಾಬಿ ಮಾಡಿದ್ದರೆಂದೂ  ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News