ಬೆಂಗಳೂರು: ಪರಿಚಯಸ್ಥ ಯುವಕನಿಂದಲೇ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ

Update: 2020-12-16 12:31 GMT

ಬೆಂಗಳೂರು, ಡಿ.16: ಇಂಜಿನಿಯರಿಂಗ್ ವ್ಯಾಸಂಗಕ್ಕಾಗಿ ರಾಜಧಾನಿ ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವ ಹೀನ ಕೃತ್ಯ ಇಲ್ಲಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷದ ರಾಜು (ಹೆಸರು ಬದಲಾಯಿಸಲಾಗಿದೆ) ಎಂಬಾತನನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಹೊರರಾಜ್ಯದಿಂದ ಬೆಂಗಳೂರಿಗೆ ಬಂದಿದ್ದ 21 ವರ್ಷದ ವಿದ್ಯಾರ್ಥಿನಿ, ತನ್ನದೇ ರಾಜ್ಯದ ಹಾಗೂ ಮೊದಲಿನಿಂದ ಈಕೆಯ ಕುಟುಂಬಸ್ಥರಿಗೆ ಪರಿಚಯವಾಗಿದ್ದ ರಾಜುನನ್ನು ಮಂಗಳವಾರ ಭೇಟಿ ಆಗಿ, ಇಂಜಿನಿಯರಿಂಗ್ ಪ್ರವೇಶ ಸಂಬಂಧ ಮಾತುಕತೆ ನಡೆಸಿದ್ದಳು. ತದನಂತರ, ಬುಧವಾರ ಕಾಲೇಜಿಗೆ ಪ್ರವೇಶ ಶುಲ್ಕ ಪಾವತಿ ಮಾಡುವ ಸಲುವಾಗಿ ಆರೋಪಿ ರಾಜು ಮನೆಗೆ ತೆರಳಿದಾಗ ರಾಜು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಇದನ್ನು ಕಂಡು ರಾಜು ಗಾಬರಿಗೊಂಡಿದ್ದಾನೆ. ಸ್ವಲ್ಪ ಸಮಯದ ನಂತರ ಸ್ಥಳೀಯರನ್ನು ಸಹಾಯಕ್ಕಾಗಿ ಕರೆದಿದ್ದು, ಅಲ್ಲಿಂದ ಆಟೊದಲ್ಲಿ ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾನೆ. ಆದರೆ, ಆಕೆ ಮನೆಯಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ವಿದ್ಯಾರ್ಥಿನಿಯ ಪೋಷಕರಿಗೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News