ಬಿಜೆಪಿ ಆಡಳಿತದಲ್ಲಿ ಜನಸಾಮಾನ್ಯರ ಮೇಲೆ ತೆರಿಗೆ ಹೆಚ್ಚಳ: ರಾಮಲಿಂಗಾರೆಡ್ಡಿ

Update: 2020-12-16 12:38 GMT

ಬೆಂಗಳೂರು, ಡಿ.16: ಬೆಂಗಳೂರಿನಲ್ಲಿ ಕಸ ಸಂಗ್ರಹಣೆಗೆ ಪ್ರತಿ ಮನೆಗೆ ಮಾಸಿಕ ಶುಲ್ಕ ವಿಧಿಸಲು ಮುಂದಾಗಿರುವ ಬಿಜೆಪಿ ಸರಕಾರದ ಕ್ರಮ ಜನವಿರೋಧಿಯಾಗಿದೆ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕೆಂದು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಒತ್ತಾಯಿಸಿದ್ದಾರೆ.

ಬುಧವಾರ ಬಿಬಿಎಂಪಿ ಕಸ ಸಂಗ್ರಹಣೆಗೆ ಮಾಸಿಕ ಶುಲ್ಕ ವಿಧಿಸುತ್ತಿರುವುದನ್ನು ಖಂಡಿಸಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ಕಸದ ನಿರ್ವಹಣೆಗಾಗಿ ಮೀಸಲಿಟ್ಟಿರುವ ಹಣದಿಂದಲೇ ಕಸ ವಿಲೇವಾರಿ ಸೇರಿದಂತೆ ವಿವಿಧ ರೀತಿಯಲ್ಲಿ ನಿರ್ವಹಿಸಬಹುದಾಗಿದೆ. ಆದರೂ ರಾಜ್ಯ ಸರಕಾರ ಕಸದ ನಿರ್ವಹಣೆಗಾಗಿ ಪ್ರತಿ ಮನೆಗೆ ಮಾಸಿಕ ಶುಲ್ಕವನ್ನು ವಿಧಿಸಲು ಮುಂದಾಗಿದೆ. ಬಿಜೆಪಿ ಸರಕಾರ ಕೋವಿಡ್ ಸಮಸ್ಯೆಯ ನಡುವೆ ಜನತೆಯನ್ನು ಮತ್ತಷ್ಟು ಸಮಸ್ಯೆಗೆ ಈಡು ಮಾಡುವುದು ಸರಿಯಲ್ಲವೆಂದು ತಿಳಿಸಿದ್ದಾರೆ.

ಬಿಜೆಪಿ ಆಡಳಿತಾವಧಿಯಲ್ಲಿ ಜನಸಾಮಾನ್ಯರ ಮೇಲೆ ತೆರಿಗೆ ವಿಫರಿತವಾಗಿ ಹೆಚ್ಚಾಗಿದೆ. ಹೊಸದಾಗಿ ಮನೆ ಕಟ್ಟುವವರಿಗೆ ತೆರಿಗೆ ಹೆಚ್ಚಳ ಮಾಡಲಾಗಿದೆ. ಬಡವರು, ಮಧ್ಯಮ ವರ್ಗದವರಿಗೆ ಹೆಚ್ಚಿನ ತೆರಿಗೆ ವಿಧಿಸಿ, ಶ್ರೀಮಂತರಿಗೆ ತೆರಿಗೆ ವಿನಾಯಿತಿ ನೀಡುವುದು ಬಿಜೆಪಿಯ ಉದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರಕಾರ ಕಸದ ನಿರ್ವಹಣೆಗಾಗಿ ಜನತೆಯಿಂದ ಮಾಸಿಕ ಶುಲ್ಕವನ್ನು ಯಾವುದೇ ಕಾರಣಕ್ಕೂ ಪಡೆದುಕೊಳ್ಳಬಾರದು. ಈಗಾಗಲೇ ಕೋವಿಡ್‍ನಿಂದಾಗಿ ಜನತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ನಡುವೆ ಜನವಿರೋಧಿ ನೀತಿಗಳನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದೆಂದು ಅವರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹರಿಪ್ರಸಾದ್, ಶಾಸಕ ಸೌಮ್ಯಾರೆಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News