ಉಲ್ಬಣಗೊಳ್ಳುತ್ತಿರುವ ವಸತಿ ರಹಿತರ ಸಮಸ್ಯೆ

Update: 2020-12-18 05:40 GMT

ಸದ್ಯಕ್ಕೆ ಭಾರತದ ರೈತರು, ಕಾರ್ಮಿಕರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಕೊರೋನ ಹೆಸರಿನಲ್ಲಿ ಸರಕಾರ ಚಳಿಗಾಲದ ಅಧಿವೇಶನವನ್ನು ರದ್ದು ಮಾಡಿರುವಾಗ, ಇತ್ತ ಸಾವಿರಾರು ರೈತರು ದಿಲ್ಲಿಯ ಬೀದಿಯಲ್ಲಿ ತೀವ್ರ ಚಳಿಯ ಜೊತೆಗೆ ಒದ್ದಾಡುತ್ತಿದ್ದಾರೆ. ಕಾಯಿಲೆ ಬೀಳುತ್ತಿದ್ದಾರೆ. ಹಲವರು ಮೃತಪಟ್ಟಿದ್ದಾರೆ. ಸರಕಾರ ಮಾತ್ರ ನಿಷ್ಕರುಣಿಯಾಗಿದೆ. ರೈತ ವಿರೋಧಿ, ಕಾರ್ಮಿಕ ವಿರೋದಿ ಕಾನೂನು ಹಂತ ಹಂತವಾಗಿ ಜಾರಿಗೊಳ್ಳುತ್ತಾ ಹೋದರೆ ಈ ದೇಶದಲ್ಲಿ ವಸತಿ ಹೀನರ ಸಂಖ್ಯೆ ಹೆಚ್ಚಳವಾಗಲಿದೆ ಎನ್ನುವುದು ತಜ್ಞರ ಅನಿಸಿಕೆ. ರೈತರು ಕೃಷಿಯಲ್ಲಿ ವಿಫಲವಾದಾಗ ಅವರು ತಮ್ಮ ಜಮೀನನ್ನು ಶ್ರೀಮಂತರಿಗೆ ಮಾರಿ ನಗರದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯಬೇಕಾಗುತ್ತದೆ. ಹೀಗೆ ಗ್ರಾಮೀಣ ಪ್ರದೇಶದಿಂದ ವಲಸೆ ಬಂದು ನಗರಗಳ ಬೀದಿಗಳಲ್ಲಿ ಚಳಿ ಬಿಸಿಲೆನ್ನದೆ ಕಾಲ ಕಳೆಯುತ್ತಿರುವವರ ದೊಡ್ಡ ಸಂಖ್ಯೆಯಿದೆ. ಈ ಸಂಖ್ಯೆ ಭವಿಷ್ಯದಲ್ಲಿ ಹೆಚ್ಚಾಗಲಿದೆ.

ಭಾರತದಲ್ಲಿ ವಸತಿ ರಹಿತರ ಸಂಖ್ಯೆ ಸುಮಾರು 1.77 ಮಿಲಿಯನ್ ಆಗಿದ್ದು ಇದರಲ್ಲಿ ಸುಮಾರು ಶೇ.52 ಜನ ನಗರ ಪ್ರದೇಶದಲ್ಲಿದ್ದಾರೆ ಎಂದು 2011ರ ಗಣತಿಯ ವರದಿ ತಿಳಿಸಿದೆ. ವಸತಿ ಮತ್ತು ಭೂ ಹಕ್ಕಿಗಾಗಿ ಹೋರಾಡುವ ಸಂಘಟನೆಗಳ ಪ್ರಕಾರ , ಗಣತಿ ದಾಖಲೆಯಲ್ಲಿ ಉಲ್ಲೇಖಿಸಿರುವುದಕ್ಕಿಂತಲೂ ವಾಸ್ತವ ಪ್ರಮಾಣ ಇದಕ್ಕಿಂತ ದುಪ್ಪಟ್ಟಿಗೂ ಅಧಿಕವಾಗಿದೆ. ಇದೇ 2011ರ ಗಣತಿಯ ಪ್ರಕಾರ, ನಮ್ಮ ದೇಶದ ಸುಮಾರು 68 ಮಿಲಿಯನ್ ಜನತೆ ತಾತ್ಕಾಲಿಕ ವಸತಿಗಳಲ್ಲಿ ನೆಲೆಸಿದ್ದಾರೆ (ನಗರ ಪ್ರದೇಶದ ಶೇ.17 ಜನಸಂಖ್ಯೆ ಈ ವಿಭಾಗಕ್ಕೆ ಸೇರುತ್ತದೆ).ಒಕ್ಕಲೆಬ್ಬಿಸುವ ಬೆದರಿಕೆ, ಕುಡಿಯುವ ನೀರು, ಸಾಕಷ್ಟು ಊಟ ಹಾಗೂ ಶಿಕ್ಷಣದ ಕೊರತೆ ಮತ್ತು ನಗರಾಭಿವೃದ್ಧಿ ಚಟುವಟಿಕೆಯಿಂದ ನೆಲೆ ಕಳೆದುಕೊಳ್ಳುವ ಪರಿಸ್ಥಿತಿ - ಇದು ಇವರು ತಲೆತಲಾಂತರದಿಂದ ಪ್ರತೀ ದಿನ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಸಮಾಜದ ಅತ್ಯಂತ ದುರ್ಬಲ ವರ್ಗಕ್ಕೆ ಸೇರಿರುವ ಇವರನ್ನು ಕೇಂದ್ರೀಕರಿಸಿ ರೂಪಿಸಿದ ಸರಕಾರದ ಯೋಜನೆಗಳು ಇವರನ್ನು ತಲುಪದಿರುವ ಕಾರಣ ಇವರ ಪರಿಸ್ಥಿತಿ ಹದಗೆಡುತ್ತಾ ಸಾಗಿದೆ. ಕುಡಿಯುವ ನೀರಿನಂತಹ ಕೆಲವು ಮೂಲಭೂತ ಅಗತ್ಯತೆಗಳು ಇವರಿಗೆ ದಕ್ಕುವುದಿಲ್ಲ.

ಸಮೀಪದ ಸಾರ್ವಜನಿಕ ಸ್ಥಳಗಳಲ್ಲಿ ದೊರಕುವ ನೀರನ್ನು ಕುಡಿಯಲು ಮತ್ತು ಆಹಾರ ತಯಾರಿಸಲು ಬಳಸಬೇಕಾದ ಸ್ಥಿತಿಯಿದೆ. ಕೊರೋನ ಸೋಂಕು ಇವರ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. 'ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ' ಎಂಬ ಘೋಷಣೆ ಈ ಮನೆಯಿಲ್ಲದ ವ್ಯಕ್ತಿಗಳ ವಿಷಯದಲ್ಲಂತೂ ಅರ್ಥಹೀನವಾಗಿದೆ. ತಾವು ವಾಸಿಸುತ್ತಿರುವ ಇಕ್ಕಟ್ಟಾದ , ತಾತ್ಕಾಲಿಕ ಮನೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲೂ ಈ ಜನರಿಗೆ ಅಸಾಧ್ಯವಾಗಿದೆ. ಇವರು ವಾಸಿಸುತ್ತಿರುವ ಪ್ರದೇಶದಲ್ಲಿ ಜನಸಾಂದ್ರತೆ ಹೆಚ್ಚಿರುವುದರಿಂದ ಕೊರೋನ ಸೋಂಕು ನಿಯಂತ್ರಣ ಮೀರಿ ಹರಡಲು ಪೂರಕ ವಾತಾವರಣ ಇಲ್ಲಿದೆ.ಇಂತಹ ಸ್ಥಳಗಳಲ್ಲಿ ನೆಲೆಸುವ ಜನರು ತಮ್ಮ ವಾಸಸ್ಥಾನಗಳಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್ ನಿಯಮ ಪಾಲಿಸುವಂತೆ ದಿಲ್ಲಿ ಅರ್ಬನ್ ಶೆಲ್ಟರ್ ಇಂಪ್ರೊವ್‌ಮೆಂಟ್ ಬೋರ್ಡ್ ನಂತಹ ಸರಕಾರೇತರ ಸಂಸ್ಥೆಗಳು ಸಲಹೆ ನೀಡಿವೆ. ಆದರೆ ಇಲ್ಲಿನ ನಿವಾಸಿಗಳಲ್ಲಿ ಹೆಚ್ಚಿನವರು ದಿನಗೂಲಿಗಳಾಗಿ ದುಡಿಯುವವರು.

ದೈನಂದಿನ ದುಡಿಮೆಯಿಂದಲೇ ಕುಟುಂಬದ ಹೊಟ್ಟೆ ಹೊರೆಯುವ ಪರಿಸ್ಥಿತಿ ಇರುವಾಗ ಭವಿಷ್ಯದ ಉಪಯೋಗಕ್ಕೆ ಹಣ ಉಳಿತಾಯ ಮಾಡುವ ಪ್ರಶ್ನೆಯೇ ಇರುವುದಿಲ್ಲ. ರಾಷ್ಟ್ರೀಯ ಅಥವಾ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿರಲಿ, ಮನೆರಹಿತರಿಗೆ ಸೂಕ್ತ ಮನೆ ಹೊಂದುವ ಹಕ್ಕು ಗಳಿವೆ. ಆದರೆ ಸರಕಾರದ ಕಾನೂನು ಇರುವ ವಸತಿಗಳನ್ನು ಅವರಿಂದ ಕಿತ್ತುಕೊಳ್ಳುವ ಉದ್ದೇಶವನ್ನು ಹೊಂದಿವೆ.ವಸತಿ ರಹಿತರು ನೆಲೆಸುವ ತಾತ್ಕಾಲಿಕ ವಸತಿ ಪ್ರದೇಶದಲ್ಲಿ ಜನಸಂದಣಿ ಮತ್ತು ಅಸಮರ್ಪಕ ನೈರ್ಮಲ್ಯ ಸಾಮಾನ್ಯವಾಗಿದೆ. ದಿಲ್ಲಿ ,ಮುಂಬೈಯಂತಹ ಮಹಾನಗರಗಳಲ್ಲಿರುವ ಕೊಳೆಗೇರಿ ಮತ್ತು ತಾತ್ಕಾಲಿಕ ವಸತಿ ಪ್ರದೇಶದಲ್ಲಿ ಕ್ಷಯ ಮತ್ತು ಮಲೇರಿಯಾ ಕ್ಷಿಪ್ರವಾಗಿ ಹರಡುತ್ತಿರುವುದು ಬಹುದೊಡ್ಡ ಸಮಸ್ಯೆಯಾಗಿದೆ. ವಸತಿ ರಹಿತರು, ಅದರಲ್ಲೂ ಮುಖ್ಯವಾಗಿ ನಗರಪ್ರದೇಶದಲ್ಲಿ ತಾತ್ಕಾಲಿಕ, ಅನಧಿಕೃತ ಮನೆಗಳಲ್ಲಿ ನೆಲೆಸಿರುವ ವಸತಿ ರಹಿತರು ಗುಂಪಾಗಿ ವಾಸಿಸುತ್ತಾರೆ.

ನಗರಪ್ರದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ನಗರದತ್ತ ವಲಸೆ ಹೆಚ್ಚುತ್ತಿರುವುದರಿಂದ , ವಸತಿ ರಹಿತರಿಗೆ ಇಕ್ಕಟ್ಟಾಗಿ ನಿರ್ಮಿಸಿದ ತಾತ್ಕಾಲಿಕ ಮನೆಗಳಲ್ಲಿ ನೆಲೆಸದೆ ಬೇರೆ ಆಯ್ಕೆ ಇಲ್ಲ ಎಂಬಂತಾಗಿದೆ. ಇದರಿಂದ ಇವರು ಮಾರಕ ರೋಗ ಹಾಗೂ ಸಾಂಕ್ರಾಮಿಕ ರೋಗಗಳಿಗೆ ಸುಲಭದ ತುತ್ತಾಗುತ್ತಾರೆ. ದೇಶದ ಕಡುಬಡವರ ಹಸಿವೆ ನೀಗಿಸುವ ಉದ್ದೇಶದ 'ಅಂತ್ಯೋದಯ ಅನ್ನ ಯೋಜನೆ'ಯನ್ನು ಸರಕಾರ ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಅಧಿಕ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ಒದಗಿಸಲಾಗುತ್ತಿದೆ. 2005-06ರ ಕೇಂದ್ರ ಬಜೆಟ್ ಸಂದರ್ಭ ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳ ಸಂಖ್ಯೆ 2.5 ಕೋಟಿಗೂ ಹೆಚ್ಚಿದೆ. ಇದೀಗ ದೇಶದ 1.77 ಮಿಲಿಯನ್ ವಸತಿ ರಹಿತ ಜನರನ್ನೂ ಅಂತ್ಯೋದಯ ಅನ್ನ ಯೋಜನೆಯ ವ್ಯಾಪ್ತಿಗೆ ತರಲು ಸರಕಾರ ಮುಂದಾಗಬೇಕಿದೆ. ವಸತಿ ರಹಿತರಲ್ಲಿ ಸೂಕ್ತ ದಾಖಲೆ ಪತ್ರ ಇಲ್ಲ ಎಂಬ ಕಾರಣ ನೀಡಿ ಆಹಾರ, ನೀರು, ನೈರ್ಮಲ್ಯ ಮತ್ತು ವಸತಿ ವ್ಯವಸ್ಥೆಯನ್ನು ನಿರಾಕರಿಸಬಾರದು. ಸರಕಾರ ತನ್ನ ಯೋಜನೆಯಡಿ ಲಭಿಸುವ ವ್ಯವಸ್ಥೆಯ ಬಗ್ಗೆ ಮಾತ್ರ ಪ್ರಕಟನೆ ನೀಡುವುದಲ್ಲ, ಈ ಯೋಜನೆಗಳನ್ನು ಫಲಾನುಭವಿಗಳಿಗೆ ಯಾವ ಇಲಾಖೆ, ವಿಭಾಗ ತಲುಪಿಸುವ ಜವಾಬ್ದಾರಿ ಹೊಂದಿದೆ ಎಂಬುದನ್ನೂ ಸ್ಪಷ್ಟಪಡಿಸಬೇಕು.

ಮನೆರಹಿತರಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ಶಿಕ್ಷಣದ ಜೊತೆಗೆ, ಪೊಲೀಸ್ ಹಾಗೂ ಮೆಡಿಕಲ್ ಹೆಲ್ಪ್‌ಲೈನ್ ಸೇವೆ ಸುಲಭದಲ್ಲಿ ಒದಗುವಂತೆ ಮಾಡಬೇಕು. ಆಗ ಮಾತ್ರ ವಸತಿ ರಹಿತರ ಮುಂದಿನ ತಲೆಮಾರು ಕೌಶಲ್ಯ ಮತ್ತು ಜ್ಞಾನ ಬೆಳೆಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬಹುದು. ಸಣ್ಣ ಮತ್ತು ಮಧ್ಯಮ ಆರ್ಥಿಕ ಸಂಸ್ಥೆಗಳ ಬೆಂಬಲದಿಂದ ವಸತಿ ರಹಿತರಿಗೆ ಆರ್ಥಿಕ ನೆರವು ಒದಗಿಸುವ ಯೋಜನೆಯನ್ನು ಸರಕಾರ ಜಾರಿಗೊಳಿಸಬೇಕು. ದೇಶದ ವಿಪತ್ತು ನಿರ್ವಹಣಾ ಕಾರ್ಯನೀತಿಯಲ್ಲಿ ವಸತಿ ರಹಿತರನ್ನೂ ಸೇರಿಸಬೇಕು ಮತ್ತು ಕೊರೋನ ಸೋಂಕಿನಂತಹ ಅಸಾಮಾನ್ಯ ಪರಿಸ್ಥಿತಿಯಲ್ಲಿ ಯಾವುದೇ ಯೋಜನೆ ರೂಪಿಸುವಾಗ ವಸತಿ ರಹಿತರನ್ನು ಕಡೆಗಣಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಆದರೆ ಸದ್ಯಕ್ಕೆ ಸರಕಾರ ವಸತಿ ರಹಿತರಿಗೆ ವಸತಿಗಳನ್ನು ನೀಡುವ ಸ್ಥಿತಿಯಲ್ಲಿಲ್ಲ. ಕನಿಷ್ಠ ಗ್ರಾಮೀಣ ಪ್ರದೇಶಗಳಿಂದ ರೈತರನ್ನು ಕೂಲಿ ಕಾರ್ಮಿಕರಾಗಿ ಪರಿವರ್ತಿಸಿ ನಗರಗಳಿಗೆ ರವಾನೆ ಮಾಡುವ ರೈತ ವಿರೋಧಿ ಕಾನೂನುಗಳನ್ನು ಸರಕಾರ ಹಿಂದಕ್ಕೆ ಪಡೆಯಬೇಕು.

ನಗರಗಳು ಈಗಾಗಲೇ ನಿರ್ವಸಿತ ಕೂಲಿ ಕಾರ್ಮಿಕರಿಂದ ತುಂಬಿತುಳುಕುತ್ತಿವೆ. ಜೋಪಡಾ ಪಟ್ಟಿಗಳು ತನ್ನ ವಿಸ್ತಾರವನ್ನು ಹೆಚ್ಚಿಸುತ್ತಿವೆ. ಇಂತಹ ಹೊತ್ತಿನಲ್ಲಿ ಗ್ರಾಮೀಣ ಪ್ರದೇಶದ ಇನ್ನಷ್ಟು ರೈತರು ನಗರದೆಡೆಗೆ ವಲಸೆ ಬಂದರೆ ನಗರ ಸ್ಥಿತಿ ಇನ್ನಷ್ಟು ಅಯೋಮಯವಾಗಲಿದೆ. ನಗರದಲ್ಲಿರುವ ರೈತ ಕಾರ್ಮಿಕರು ಮತ್ತೆ ಹಳ್ಳಿಯೆಡೆಗೆ ವಲಸೆ ಹೋಗುವಂತಹ ಕಾರ್ಯಕ್ರಮಗಳು, ಯೋಜನೆಗಳು ಜಾರಿಗೆ ಬರಬೇಕು. ಈ ಮೂಲಕ ನಗರಗಳಲ್ಲಿರುವ ಕಾರ್ಮಿಕರ ಬದುಕೂ ಹಸನಾಗುತ್ತದೆ. ಅವರ ಮೇಲಿನ ದೌರ್ಜನ್ಯಗಳು ಕಡಿಮೆಯಾಗುತ್ತವೆೆ. ಇತ್ತ, ನಗರಗಳಲ್ಲಿ ನರಳುವ ರೈತರು ಹಳ್ಳಿಗಳಿಗೆ ತೆರಳಿ ಖಾಲಿ ಬಿದ್ದಿರುವ ತಮ್ಮ ತಮ್ಮ ಜಮೀನುಗಳಲ್ಲಿ ಆತ್ಮವಿಶ್ವಾಸದೊಂದಿಗೆ ಬದುಕುವ ಅವಕಾಶವೂ ಸಿಕ್ಕಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News