×
Ad

ವಿಧಾನ ಪರಿಷತ್ ಕಾಯದರ್ಶಿಗೆ ಸಭಾಪತಿಯಿಂದ ಶೋಕಾಸ್ ನೋಟಿಸ್

Update: 2020-12-18 10:03 IST
ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ

ಬೆಂಗಳೂರು, ಡಿ.18: ವಿಧಾನ ಪರಿಷತ್ ಸದನದಲ್ಲಿ ಡಿ.15ರಂದು ನಡೆದ ಅಧಿವೇಶನದಲ್ಲಿ ಕರ್ತವ್ಯಲೋಪ ಎಸಗಿದ ಮತ್ತು ಬೇಜವಾಬ್ದಾರಿಯಿಂದ ವರ್ತಿಸಿದ ಆರೋಪದಲ್ಲಿ ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಅವರಿಗೆ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿಯವರು ಶೋಕಾಸ್ ನೋಟಿಸ್ ನೀಡಿದ್ದಾರೆ.

ಬುಧವಾರವೇ ನೋಟಿಸ್ ನೀಡಿರುವ ಸಭಾಪತಿ, ಸೂಕ್ತ ದಾಖಲೆಗಳೊಂದಿಗೆ 48 ಗಂಟೆಗಳೊಳಗೆ ಉತ್ತರ ನೀಡುವಂತೆ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ. ‘‘ಡಿ.15ರಂದು ನಾನು ಸದನಕ್ಕೆ ಬರದಂತೆ ತಡೆದಿರುವುದು ಮತ್ತು ಕಲಾಪಗಳ ನಿಯಮಾವಳಿಗಳನ್ನು ಗಾಳಿಗೆ ತೂರಿ ವ್ಯತಿರಿಕ್ತವಾಗಿ ವರ್ತಿಸಿರುವ ಘಟನೆ ಕುರಿತು ಸಮೂಹ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಘಟನೆಯಿಂದ ಶತಮಾನದ ಇತಿಹಾಸವುಳ್ಳ ವಿಧಾನ ಪರಿಷತ್ತಿನ ಗೌರವ, ಸಂಪ್ರದಾಯ ಮತ್ತು ಪರಂಪರೆಗೆ ಧಕ್ಕೆಯಾಗಿದೆ’’ ಎಂದು ಸಭಾಪತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘‘ಡಿ.15ರಂದು ಕೋರಂ ಬೆಲ್ ಮುಗಿಯುವ ಮುನ್ನವೇ ಉಪ ಸಭಾಪತಿಯವರು ಸಭಾಪತಿ ಪೀಠ ಏರಿದ್ದರು. ನಾನು ಸದನಕ್ಕೆ ಬರದಂತೆ ಬಾಗಿಲು ಮುಚ್ಚಿ ಅಡ್ಡಿಪಡಿಸಲಾಗಿತ್ತು. ನಿಯಮಬಾಹಿರವಾಗಿ ಪೀಠದಲ್ಲಿ ಕುಳಿತಿದ್ದ ಉಪ ಸಭಾಪತಿಗೆ ದಾಖಲೆಗಳನ್ನು ಒದಗಿಸುವ ಮೂಲಕ, ಕಾನೂನಿಗೆ ವಿರುದ್ಧವಾಗಿ ಸದನ ನಡೆಸುವ ಚಿತಾವಣೆಯಲ್ಲಿ ತಾವು ಭಾಗಿಯಾಗಿರುವುದನ್ನು ಹಲವು ಸಾಕ್ಷ್ಯಗಳಲ್ಲಿ ಗಮನಿಸಿರುತ್ತೇನೆ’’ ಎಂದು ಸಭಾಪತಿ ನೋಟಿಸ್ ನಲ್ಲಿ ತಿಳಿಸಿದ್ದಾರೆ.

‘‘ನಿಮ್ಮ ವರ್ತನೆಯು ವಿಧಾನ ಮಂಡಲದ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿದೆ. ನಿಯಮಬಾಹಿರ, ಕರ್ತವ್ಯ ನಿರ್ಲಕ್ಷ, ಬೇಜವಾಬ್ದಾರಿ ಮತ್ತು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಅಧಿಕಾರ ವ್ಯಾಪ್ತಿ ಮೀರಿರುವ ನಿಮ್ಮ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ಅಡಿಯಲ್ಲಿ ಏಕೆ ಕ್ರಮ ಜರುಗಿಸಬಾರದು?’’ ಎಂದು ನೋಟಿಸ್‌ನಲ್ಲಿ ಕೇಳಿದ್ದಾರೆ.

‘‘ಸಾರ್ವಜನಿಕ ಚರ್ಚೆ, ಟೀಕೆ, ಪತ್ರಿಕಾ ಸಂಪಾದಕೀಯಗಳು, ಸದನದ ಹಿಂದಿನ ಸಭಾಪತಿಯವರ ಅಭಿಪ್ರಾಯಗಳಿಗೆ ಸದನದ ಮುಖ್ಯಸ್ಥನಾದ ನಾನು ನೈಜ ಸಂಗತಿಗಳ ಆಧಾರದಲ್ಲಿ ವಿವರಣೆ ನೀಡಬೇಕಿದೆ. ಆದ್ದರಿಂದ ನಾನು ಸದನಕ್ಕೆ ಬಂದು ಕಲಾಪವನ್ನು ಮುಂದೂಡುವವರೆಗೆ ನನ್ನ ಅನುಪಸ್ಥಿತಿಯಲ್ಲಿ ಮತ್ತು ಕಲಾಪ ಮುಂದೂಡಿ ನಿರ್ಗಮಿಸಿದ ಬಳಿಕ ನಡೆದ ಘಟನಾವಳಿಗಳಿಗೆ ನೀವು ಪ್ರತ್ಯಕ್ಷದರ್ಶಿಯಾಗಿದ್ದಿರಿ. ಈ ಘಟನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ವರದಿಯನ್ನು ಕೂಡಲೇ ಸಲ್ಲಿಸಬೇಕು’’ ಎಂದು ಪತ್ರದಲ್ಲಿ ಸಭಾಪತಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News