ಬೆಂಗಳೂರು: ಪೊಲೀಸ್ ದಂಪತಿ ಆತ್ಮಹತ್ಯೆ
ಬೆಂಗಳೂರು, ಡಿ.18: ರಾಜಧಾನಿಯಲ್ಲಿ ಡಿವೈಎಸ್‍ಪಿ ಲಕ್ಷ್ಮಿ ಎಂಬುವವರ ನಿಗೂಢ ಸಾವಿನ ಬೆನ್ನಲ್ಲೇ ಇಲ್ಲಿನ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಪೊಲೀಸ್ ದಂಪತಿಗಳು ಆತ್ಮಹತ್ಮೆ ಮಾಡಿಕೊಂಡಿರುವುದು ವರದಿಯಾಗಿದೆ.
ಬುಧವಾರವಷ್ಟೇ ಡಿವೈಎಸ್‍ಪಿ ನಿಗೂಢವಾಗಿ ಸಾವಿಗೀಡಾಗಿದ್ದರು. ಇದೀಗ ಪೊಲೀಸ್ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾನ್‍ಸ್ಟೇಬಲ್‍ಗಳಾಗಿ ಕೆಲಸ ಮಾಡುತ್ತಿದ್ದ ಇವರಿಬ್ಬರೂ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ದಂಪತಿಗೆ ಮಕ್ಕಳಾಗಿರಲಿಲ್ಲ ಎಂಬ ಕೊರಗು ಇತ್ತು ಎನ್ನಲಾಗಿದೆ.
ಸಂಪಿಗೆಹಳ್ಳಿಯ ಎಸಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ಹೆಚ್.ಸಿ.ಸುರೇಶ್(37) ಹಾಗೂ ಸಿಟಿ ಎಸ್‍ಬಿಯಲ್ಲಿ ಮುಖ್ಯ ಪೇದೆಯಾಗಿದ್ದ ಅವರ ಪತ್ನಿ ಶೀಲಾ(36) ಅವರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಂಪತಿಯು ಕೊತ್ತನೂರಿನ ನಕ್ಷತ್ರ ಲೇಔಟ್‍ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ದಂಪತಿಯ ಪೋಷಕರಾಗಲಿ ಸಂಬಂಧಿಕರಾಗಲಿ ಅವರ ಜೊತೆಗಿರಲಿಲ್ಲ. ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಬಂದಿದ್ದ ದಂಪತಿಯು ಊಟ ಮುಗಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದುತಿಳಿದುಬಂದಿದೆ.
ಮಕ್ಕಳಾಗದ ಹಿನ್ನೆಲೆ ಮನನೊಂದು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕೊತ್ತನೂರು ಠಾಣೆಯ ಡಿಸಿಪಿ ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.