ಮುಷ್ಕರದಲ್ಲಿ ಪಾಲ್ಗೊಂಡ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂಬುದು ಸತ್ಯಕ್ಕೆ ದೂರ: ಕೆಎಸ್ಸಾರ್ಟಿಸಿ
Update: 2020-12-18 14:43 IST
ಬೆಂಗಳೂರು, ಡಿ.18: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನೌಕರರ ಮುಷ್ಕರದ ಸಮಯದಲ್ಲಿ ಕರ್ತವ್ಯನಿರತ ಸಿಬ್ಬಂದಿಯ ಮೇಲೆ ದೈಹಿಕ ಹಲ್ಲೆ ಮಾಡಿ ,ಬಸ್ಸುಗಳನ್ನು ಜಖಂಗೊಳಿಸಿದ ಹಾಗೂ ಎಫ್ಐಆರ್ ದಾಖಲಾದ ಕೆಲವೇ ಸಿಬ್ಬಂದಿಯ ಮೇಲೆ ಮಾತ್ರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.
ಅದನ್ನು ಹೊರತುಪಡಿಸಿ ಇತರ ಇನ್ನಾವುದೇ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡಿರುವುದಿಲ್ಲ. ಕೋಲಾರ ವಿಭಾಗದಲ್ಲಿ 200 ನೌಕರರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದು ಸತ್ಯಕ್ಕೆ ದೂರವಾದದ್ದು ಎಂದು ಕೆಎಸ್ಸಾರ್ಟಿಸಿ ಸ್ಪಷ್ಟಪಡಿಸಿದೆ.
ಕೆಎಸ್ಸಾರ್ಟಿಸಿ ವ್ಯಾಪ್ತಿಯಲ್ಲಿ ಒಟ್ಟು 13 ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮುಷ್ಕರ ಸಮಯದ ನಾಲ್ಕು ದಿನಗಳ ವೇತನ ಪಾವತಿ ಕಡಿತದ ಬಗ್ಗೆಯೂ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ, ಮಂಡಳಿ/ ಸರಕಾರದ ಮಟ್ಟದಲ್ಲಿ ಇದರ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.