ಡ್ರಾಪ್ ಕೊಡುವ ನೆಪದಲ್ಲಿ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ: ಆರೋಪಿ ಆಟೋ ಚಾಲಕನ ಬಂಧನ

Update: 2020-12-18 12:50 GMT

ಬೆಂಗಳೂರು, ಡಿ.18: ಬಸ್‍ಗಾಗಿ ಕಾಯುತ್ತಿದ್ದ ಕಾಲೇಜು ಯುವತಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ ಆರೋಪದ ಮೇಲೆ ಆಟೋ ಚಾಲಕನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿಯ ಮುಬಾರಕ್(28) ಬಂಧಿತ ಆರೋಪಿಯಾಗಿದ್ದಾನೆ. 19 ವರ್ಷದ ಅತ್ಯಾಚಾರ ಸಂತ್ರಸ್ತೆ ಕಾಲೇಜು ಯುವತಿ ಮಾಗಡಿ ರಸ್ತೆಯ ಬಳಿಯ ನಿವಾಸಿಯಾಗಿದ್ದು, ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಾರೆ. ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೂಡ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು. ಇವರು ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಬಾಬಾ ಹೇಳಿದ್ದಾರೆ.

ಡಿ.9 ರಂದು ಥಣಿಸಂದ್ರ ಬಳಿ ಮದುವೆ ಕಾರ್ಯಕ್ರಮವೊಂದರಲ್ಲಿ ನಿರೂಪಣೆ ಮಾಡಲು ಆಗಮಿಸಿದ್ದರು. ಮದುವೆ ಮುಗಿದ ಮರುದಿನ ಮನೆಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಮಾರುಕಟ್ಟೆ ಕಡೆಗೆ ಹೋಗುತ್ತಿದ್ದ ಆಟೋ ಚಾಲಕ ಆಕೆಯನ್ನು ಆಟೋಗೆ ಹತ್ತಿಸಿಕೊಂಡಿದ್ದು, ನಾಗವಾರ ಸಿಗ್ನಲ್ ಬಳಿ ನಿಲ್ಲಿಸುವಂತೆ ಯುವತಿ ಸೂಚಿಸಿದರೂ, ವೇಗವಾಗಿ ಆಟೋವನ್ನು ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಯುವತಿ ಆಟೋ ನಿಲ್ಲಿಸುವಂತೆ ಚೀರಾಡಿಕೊಳ್ಳಲು ಶುರು ಮಾಡಿದ್ದಾಳೆ. ಆಗ ಆಟೋ ಚಾಲಕ ಸ್ನೇಹಿತನ ಕೈಯಿಂದ ಹಣ ತೆಗೆದುಕೊಳ್ಳಬೇಕು ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ಆಟೋ ತೆಗೆದುಕೊಂಡು ಹೋಗಿ ಅಲ್ಲಿ ಯುವತಿಯ ಅತ್ಯಾಚಾರವೆಸಗಿದ್ದು, ನಂತರ ಮುಖ್ಯ ರಸ್ತೆ ಬಳಿ ಬಿಟ್ಟು ಬೊಬ್ಬೆ ಹಾಕದಂತೆ, ಹಾಕಿದರೆ ಕೊಂದು ಬಿಡುತ್ತೇನೆಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಬಳಿಕ ಸಂತ್ರಸ್ತೆ ನಿರ್ಜನ ಪ್ರದೇಶದಿಂದ ಹತ್ತಿರವಿದ್ದ ಮುಖ್ಯರಸ್ತೆಗೆ ನಡೆದುಕೊಂಡು ಬಂದು, ಅದೇ ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದವರ ಸಹಾಯದ ಮೂಲಕ ಮನೆ ಸೇರಿದ್ದಳು. ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲೇರಿದ್ದ ಯುವತಿಯು, ಆರೋಪಿಯ ಆಟೋ ನಂಬರ್ ನ್ನು ಪೊಲೀಸರಿಗೆ ತಿಳಿಸಿದ್ದಳು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ಯುವತಿ ನೀಡಿದ ಆಟೋ ನಂಬರ್ ಪರಿಶೀಲಿಸಿದಾಗ ಆರೋಪಿ ಮುಬಾರಕ್‍ನ ಸುಳಿವು ಸಿಕ್ಕಿತ್ತು. ಕೂಡಲೇ ಆತನನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News