×
Ad

ವಿಸ್ಟ್ರಾನ್ ಹಿಂಸಾಚಾರ: ಕೆಲವು ಕಾರ್ಮಿಕರಿಗೆ ಸೂಕ್ತ ವೇತನ ದೊರೆಯುತ್ತಿರಲಿಲ್ಲ ಎನ್ನುವುದನ್ನು ಒಪ್ಪಿಕೊಂಡ ಕಂಪನಿ

Update: 2020-12-19 20:54 IST

ಬೆಂಗಳೂರು,ಡಿ.19: ಕಳೆದ ವಾರ ಬೆಂಗಳೂರು ಹೊರವಲಯದ ಕೋಲಾರ ಜಿಲ್ಲೆಯ ನರಸಾಪುರದಲ್ಲಿರುವ ತನ್ನ ಐಫೋನ್ ಫ್ಯಾಕ್ಟರಿಯಲ್ಲಿ ಕಾರ್ಮಿಕರ ದಂಗೆಯ ಬಳಿಕ ವಿವಾದದ ಕೇಂದ್ರಬಿಂದುವಾಗಿರುವ ತೈವಾನ್ ಮೂಲದ ವಿಸ್ಟ್ರಾನ್ ಕಂಪನಿಯು ತನ್ನ ಕೆಲವು ಕಾರ್ಮಿಕರಿಗೆ ಸೂಕ್ತ ವೇತನಗಳನ್ನು ನೀಡಲಾಗುತ್ತಿರಲಿಲ್ಲ ಮತ್ತು ಕೆಲವು ಪ್ರಕರಣಗಳಲ್ಲಿ ಸಕಾಲಕ್ಕೆ ವೇತನಗಳು ಪಾವತಿಯಾಗಿರಲಿಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ. ವಿಸ್ಟ್ರಾನ್ ಅಮೆರಿಕದ ಆ್ಯಪಲ್ ಕಂಪನಿಗಾಗಿ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸುತ್ತಿರುವ ಮೊದಲ ಸಂಸ್ಥೆಯಾಗಿದೆ.

 ‘ನಮ್ಮ ನರಸಾಪುರ ಘಟಕದಲ್ಲಿ ಸಂಭವಿಸಿದ ದುರದೃಷ್ಟಕರ ಘಟನೆಗಳ ಬಗ್ಗೆ ನಾವು ತನಿಖೆಯನ್ನು ಕೈಗೊಂಡಿದ್ದು,ಕೆಲವು ಕಾರ್ಮಿಕರಿಗೆ ಸೂಕ್ತ ವೇತನಗಳನ್ನು ನೀಡುತ್ತಿರಲಿಲ್ಲ ಅಥವಾ ಸಕಾಲಕ್ಕೆ ವೇತನ ಪಾವತಿಯಾಗುತ್ತಿರಲಿಲ್ಲ ಎನ್ನುವುದು ಬಹಿರಂಗಗೊಂಡಿದೆ. ಇದಕ್ಕಾಗಿ ನಾವು ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತೇವೆ ಮತ್ತು ನಮ್ಮ ಎಲ್ಲ ಕಾರ್ಮಿಕರ ಕ್ಷಮೆಯನ್ನು ಕೋರುತ್ತೇವೆ ’ ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ವಿಸ್ಟ್ರಾನ್,‘ಭಾರತದಲ್ಲಿ ನಮ್ಮ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಕಂಪನಿಯ ಉಪಾಧ್ಯಕ್ಷರನ್ನು ವಜಾಗೊಳಿಸುತ್ತಿದ್ದೇವೆ. ಇಂತಹ ಘಟನೆಳು ಮರುಕಳಿಸದಂತೆ ನೋಡಿಕೊಳ್ಳಲು ನಮ್ಮ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತಿದ್ದೇವೆ ಮತ್ತು ನಮ್ಮ ತಂಡಗಳನ್ನು ಪುನರ್‌ರಚಿಸುತ್ತಿದ್ದೇವೆ. ಎಲ್ಲ ಕಾರ್ಮಿಕರಿಗೆ ತಕ್ಷಣವೇ ಸಂಪೂರ್ಣ ಪರಿಹಾರ ದೊರೆಯುವಂತೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಮತ್ತು ಇದನ್ನು ಸಾಧಿಸಲು ನಾವು ಶ್ರಮಿಸುತ್ತಿದ್ದೇವೆ ’ಎಂದು ಹೇಳಿದೆ.

ಶನಿವಾರ ಮಧ್ಯಾಹ್ನ ಪ್ರತ್ಯೇಕ ಹೇಳಿಕೆಯೊಂದರಲ್ಲಿ ಆ್ಯಪಲ್,‘ನಮ್ಮ ಎಲ್ಲ ಪೂರೈಕೆದಾರರಿಗೆ ನಾವು ವಿಧಿಸಿರುವ ನೀತಿಸಂಹಿತೆಯನ್ನು ವಿಸ್ಟ್ರಾನ್ ಉಲ್ಲಂಘಿಸಿರುವುದು ನಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ವಿಸ್ಟ್ರಾನ್ ತಿದ್ದುಪಡಿ ಕ್ರಮಗಳನ್ನು ಕೈಗೊಂಡು ಸಮಸ್ಯೆಯನ್ನು ಪೂರ್ಣವಾಗಿ ಬಗೆಹರಿಸುವವರೆಗೆ ನಾವು ಅವರಿಗೆ ಹೊಸ ಬೇಡಿಕೆಗಳನ್ನು ಸಲ್ಲಿಸುವುದಿಲ್ಲ. ಆ್ಯಪಲ್ ಉದ್ಯೋಗಿಗಳು ಸ್ವತಂತ್ರ ಲೆಕ್ಕ ಪರಿಶೋಧಕರೊಂದಿಗೆ ವಿಸ್ಟ್ರಾನ್ ಕ್ರಮಗಳ ಮೇಲೆ ನಿಗಾ ಇರಿಸಲಿದ್ದಾರೆ. ಎಲ್ಲ ಕಾರ್ಮಿಕರನ್ನು ಘನತೆ ಮತ್ತು ಗೌರವದೊಂದಿಗೆ ನೋಡಿಕೊಳ್ಳಬೇಕು ಹಾಗೂ ಅವರಿಗೆ ಸೂಕ್ತ ಪರಿಹಾರ ಪೂರ್ಣವಾಗಿ ದೊರೆಯಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶವಾಗಿದೆ ’ಎಂದು ತಿಳಿಸಿದೆ.

ತಮ್ಮ ಬಾಕಿ ವೇತನಗಳನ್ನು ಪಾವತಿಸಬೇಕು ಮತ್ತು ಕೆಲಸದ ಸ್ಥಳದಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಬೇಡಿಕೆಗಳೊಂದಿಗೆ ಡಿ.12ರಂದು ವಿಸ್ಟ್ರಾನ್‌ನ ಹಲವಾರು ಕಾರ್ಮಿಕರು ನಡೆಸಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು ಮತ್ತು ಕಂಪನಿಯ ಆಸ್ತಿಗಳಿಗೆ ತೀವ್ರ ಹಾನಿಯುಂಟಾಗಿತ್ತು. ಕಾರ್ಮಿಕರ ದಾಂಧಲೆಯಿಂದ 400 ಕೋ.ರೂ.ಅಧಿಕ ನಷ್ಟವುಂಟಾಗಿದೆ ಎಂದು ಕಂಪನಿಯು ಪ್ರಾಥಮಿಕ ಎಫ್‌ಐಆರ್‌ನಲ್ಲಿ ತಿಳಿಸಿತ್ತಾದರೂ ಬಳಿಕ ಅದನ್ನು 41 ಕೋ.ರೂ.ಗಳಿಗೆ ಪರಿಷ್ಕರಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಈವರೆಗೆ 150ಕ್ಕೂ ಅಧಿಕ ಜನರನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ.

ತನ್ನ ‘ಮೇಕ್ ಇನ್ ಇಂಡಿಯಾ ’ಯೋಜನೆಯ ಅಂಗವಾಗಿ ಚೀನಾವನ್ನು ತೊರೆಯುತ್ತಿರುವ ಕಂಪನಿಗಳನ್ನು ಸೆಳೆಯಲು ಪ್ರಯತ್ನಿಸುತ್ತಿರುವ ನರೇಂದ್ರ ಮೋದಿ ಸರಕಾರಕ್ಕೆ ವಿಸ್ಟ್ರಾನ್ ಐಫೋನ್ ತಯಾರಿಕೆ ಫ್ಯಾಕ್ಟರಿಯು ಹೆಮ್ಮೆಯ ವಿಷಯವಾಗಿದ್ದರಿಂದ ಕಾರ್ಮಿಕರ ದಾಂಧಲೆ ತಕ್ಷಣವೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ಸೆಪ್ಟೆಂಬರ್‌ನಲ್ಲಿ ಆ್ಯಪಲ್ ಭಾರತದಲ್ಲಿ ತನ್ನ ನೇರ ಆನ್‌ಲೈನ್ ಮಾರಾಟ ಮಳಿಗೆಯನ್ನು ಆರಂಭಿಸಿತ್ತು. ಮಾಧ್ಯಮಗಳ ವರದಿಯಂತೆ ಕೋವಿಡ್ ಪಿಡುಗಿಗೆ ಮುನ್ನ ಕೇವಲ 2,000 ಇದ್ದ ವಿಸ್ಟ್ರಾನ್ ಕಾರ್ಮಿಕರ ಸಂಖ್ಯೆ ಕಳೆದ ಎಂಟು ತಿಂಗಳುಗಳಲ್ಲಿ 9,000ಕ್ಕೆ ಏರಿತ್ತು. ವಿಸ್ಟ್ರಾನ್ ಹೇಳುವಂತೆ ಫ್ಯಾಕ್ಟರಿಯಲ್ಲಿ 1,343 ಖಾಯಂ ನೌಕರರು ಮತ್ತು 8,490 ಗುತ್ತಿಗೆ ಆಧಾರದ ಕಾರ್ಮಿಕರಿದ್ದಾರೆ. ಆದರೆ ಅಷ್ಟೊಂದು ಕಾರ್ಮಿಕರನ್ನು ನಿರ್ವಹಿಸಲು ಕಂಪನಿಯಲ್ಲಿ ಅಗತ್ಯ ಮೂಲಸೌಕರ್ಯಗಳು ಇರಲಿಲ್ಲ ಎನ್ನಲಾಗಿದೆ.

ಹಿಂಸಾಚಾರದ ಬಳಿಕ ರಾಜ್ಯ ಕಾರ್ಮಿಕ ಇಲಾಖೆಯ ಕೋಲಾರ ವೃತ್ತ ಕಚೇರಿಯು ಸಲ್ಲಿಸಿರುವ ವರದಿಯಲ್ಲಿ ವಿಸ್ಟ್ರನ್ ಹಾಜರಾತಿ ಮತ್ತು ವೇತನ ದಾಖಲೆಗಳಲ್ಲಿ ಇಟ್ಟಿಲ್ಲ ಎಂದು ಬೆಟ್ಟು ಮಾಡಲಾಗಿದೆ.

ಕಂಪನಿಗೆ ಕಾರ್ಮಿಕರನ್ನು ಪೂರೈಸಿದ್ದ ಐವರು ಗುತ್ತಿಗೆದಾರರು ಕೆಲವರಿಗೆ ಕಳೆದ ಮೂರು ತಿಂಗಳುಗಳಿಂದ ವೇತನಗಳನ್ನು ಪಾವತಿಸಿರಲಿಲ್ಲ ಮತ್ತು ಇದು ಹಿಂಸಾಚಾರಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿತ್ತು. ಕೇವಲ 50 ನಿಮಿಷಗಳ ವಿರಾಮ ನೀಡಿ ತಮ್ಮನ್ನು 8ರಿಂದ 12 ಗಂಟೆ ಕಾಲ ದುಡಿಸಲಾಗುತ್ತಿತ್ತು ಎಂದು ಕೆಲವರು ದೂರಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಾರ್ಮಿಕರ ದಂಗೆಯ ಹಿಂದೆ ಸ್ಟುಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ)ದ ಕೈವಾಡವಿರಬಹುದು ಎಂದು ಕೋಲಾರದ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಆರೋಪಿಸುವುದರೊಂದಿಗೆ ಈ ಘಟನೆಯು ರಾಜಕೀಯ ಬಣ್ಣವನ್ನು ಪಡೆದುಕೊಂಡಿತ್ತು. ಕೋಲಾರ ಪೊಲೀಸರು ಆರಂಭದಲ್ಲಿ ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಶ್ರೀಕಾಂತರನ್ನು ಬಂಧಿಸಿದ್ದರಾದರೂ,ವಿಚಾರಣೆಯ ಬಳಿಕ ಶುಕ್ರವಾರ ಅವರನ್ನು ಬಿಡುಗಡೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News