ಆಡಳಿತ ಮಂಡಳಿ ಹಠಮಾರಿ ಧೋರಣೆ ಕೈಬಿಟ್ಟು ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಲಿ: ಡಿ.ಕೆ.ಸುರೇಶ್
ಬೆಂಗಳೂರು : ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆಯ ಆಡಳಿತ ಮಂಡಳಿ ತನ್ನ 'ಒಡೆದು ಆಳುವ ಧೋರಣೆ'ಯನ್ನು ಕೈಬಿಟ್ಟು ಕೂಡಲೇ ಕಾರ್ಮಿಕರೊಂದಿಗೆ ಜತೆ ಮಾತುಕತೆ ಮೂಲಕ ಬಿಕ್ಕಟ್ಟು ಪರಿಹರಿಸಿಕೊಳ್ಳಬೇಕು ಎಂದು ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ತಾಕೀತು ಮಾಡಿದ್ದಾರೆ.
ಬುಧವಾರ ಕಾರ್ಮಿಕರ ಅಮಾನತ್ತು ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 45 ದಿನಗಳಿಂದ ಹೋರಾಟನಿರತ ಕಾರ್ಮಿಕರಿಗೆ ಬೆಂಬಲ ಘೋಷಿಸಿ ಮಾತನಾಡಿದ ಅವರು, ಕಾರ್ಖಾನೆ ಹಾಗೂ ಕಾರ್ಮಿಕರ ಶೀಘ್ರವೇ ಬಗೆಹರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅತಿರೇಕ ಸಲ್ಲ: ಕಾರ್ಮಿಕರ ಅಮಾನತ್ತು ಮಾಡುವ ಮೂಲಕ ಕಾರ್ಖಾನೆಯ ಆಡಳಿತ ಮಂಡಳಿ ಅತಿರೇಕದ ವರ್ತನೆ ಸರಿಯಲ್ಲ. ಮನುಷ್ಯ ತಪ್ಪು ಮಾಡುವುದು ಸಹಜ. ಅದನ್ನು ಸರಿಪಡಿಸುವ ಕೆಲಸವನ್ನು ಮನುಷ್ಯರೇ ಮಾಡಬೇಕು ಎಂದು ಡಿ.ಕೆ.ಸುರೇಶ್ , ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.
ಖುದ್ದು ನಾನೇ ಇಂದು ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರ ಜತೆ ಚರ್ಚೆ ಮಾಡಿದ್ದೇನೆ. ಆದರೆ, ಅವರು ಕಾರ್ಮಿಕರ ಅಮಾನತ್ತು ರದ್ದು ಸೇರಿ ಇನ್ನಿತರ ವಿಚಾರಗಳಿಗೆ ತಮ್ಮದೆ ರೀತಿಯಲ್ಲಿ ವಿವರಿಸಿದ್ದಾರೆ. ಆದರೆ, ಕೂಡಲೇ ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭಕ್ಕೆ ಇನ್ನೂ 24 ಗಂಟೆಗಳ ಗಡುವು ನೀಡಿದ್ದೇನೆ. ಈ ಬಗ್ಗೆ ಚರ್ಚಿಸಿ ತಿಳಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ರಾಮನಗರ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಜಟಿಲಗೊಂಡಿರುವ ಬಿಕ್ಕಟ್ಟು ಬಗೆಹರಿಸಬೇಕಿತ್ತು. ಆದರೆ, ಇಷ್ಟು ದೀರ್ಘಾವಧಿಯ ಹೋರಾಟಕ್ಕೆ ಅವಕಾಶ ನೀಡಬಾರದಿತ್ತು. ಅದೇನೆ ಇದ್ದರೂ ಕಾರ್ಮಿಕರ ಪ್ರತಿಷ್ಠೆ ಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ಕೇಂದ್ರದ ಬಿಜೆಪಿ ಸರಕಾರ ರೈತ- ಕಾರ್ಮಿಕರ ಹಿತರಕ್ಷಣೆಗೆ ಇದ್ದ ಕಾನೂನು ಮತ್ತು ಕಾಯ್ದೆಗಳ ತಿದ್ದುಪಡಿ ಮೂಲಕ ರೈತ- ಕಾರ್ಮಿಕ ಕಾನೂನು ಗಳ ಬಲಹೀನ ನೀತಿ ಅನುಸರಿಸುತ್ತಿದೆ. ಇದರ ವಿರುದ್ಧ ದೇಶದ ಉದ್ದಗಲಕ್ಕೂ ಹೋರಾಟ ಅಗತ್ಯ. ಕಾರ್ಮಿಕರ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲ ನಿರಂತರವಾಗಿ ಇರಲಿದೆ ಎಂದು ಡಿ.ಕೆ.ಸುರೇಶ್ ಪ್ರಕಟಿಸಿದರು.