ಇನ್ಸ್​ಪೆಕ್ಟರ್​ಗೆ ಕಸ ಗುಡಿಸುವ ಶಿಕ್ಷೆ ವಿಧಿಸಿದ ಹೈಕೋರ್ಟ್: ಕಾರಣವೇನು ಗೊತ್ತೇ ?

Update: 2020-12-24 06:24 GMT

ಕಲಬುರಗಿ: ನಾಪತ್ತೆಯಾಗಿರುವ ಮಗನನ್ನು ಹುಡುಕಿಕೊಡುವಂತೆ ಕೋರಿ ಮಹಿಳೆಯೊಬ್ಬರು ನೀಡಿದ ದೂರನ್ನು ಸ್ವೀಕರಿಸಲು ಹಾಗೂ ಎಫ್ಐಆರ್ ದಾಖಲಿಸಲು ನಿರ್ಲಕ್ಷಿಸಿದ ಆರೋಪದಲ್ಲಿ ಕಲಬುರಗಿ ಜಿಲ್ಲೆಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ಗೆ ಹೈಕೋರ್ಟ್ ಒಂದು ವಾರ ರಸ್ತೆ ಕಸ ಗುಡಿಸುವ ಶಿಕ್ಷೆ ವಿಧಿಸಿ ಆದೇಶಿಸಿದೆ.

ಕರ್ತವ್ಯಲೋಪ ಎಸಗಿರುವ ಇನ್ಸ್​ಪೆಕ್ಟರ್ ಒಂದು ವಾರ ಪೊಲೀಸ್ ಠಾಣೆ ಮುಂಭಾಗದ ರಸ್ತೆಯನ್ನು ಕಸ ಗುಡಿಸಿ ಸ್ವಚ್ಛಗೊಳಿಸಬೇಕು ಎಂದು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಪಿ. ಕೃಷ್ಣಭಟ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಮಿಣಜಗಿ ತಾಂಡದ ಕೂಲಿ ಕಾರ್ಮಿಕ ಮಹಿಳೆ ತಾರಾಬಾಯಿ ತನ್ನ ಮಗ ಸುರೇಶ್ 2020ರ ಅ. 20 ರಿಂದ ನಾಪತ್ತೆಯಾಗಿದ್ದಾನೆ ಎಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಆದರೆ, ಪೊಲೀಸರು ದೂರನ್ನು ಸ್ವೀಕರಿಸಿರಲಿಲ್ಲ. ಹಾಗೆಯೇ ನಾಪತ್ತೆಯಾಗಿರುವ ತಾರಾಬಾಯಿಯ ಮಗನನ್ನು ಹುಡುಕುವ ಪ್ರಯತ್ನ ಮಾಡಿರಲಿಲ್ಲ ಎಂದು ದೂರಲಾಗಿದೆ.

ಈ ಹಿನ್ನೆಲೆಯಲ್ಲಿ ತಾರಾಬಾಯಿ ತನ್ನ ಮಗನನ್ನು ಹುಡುಕಿಸಿ ಕೊಡುವಂತೆ ಹೈಕೋರ್ಟ್​ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ನಾಪತ್ತೆಯಾಗಿರುವ ಸುರೇಶನನ್ನು ಹುಡುಕುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ಆ ಬಳಿಕ ಎಚ್ಚೆತ್ತ ಪೊಲೀಸರು ಸುರೇಶನನ್ನು ಪತ್ತೆಮಾಡಿ ನ.3ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಅರ್ಜಿ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿ ಮಹಿಳೆ ದೂರು ನೀಡಲು ಬಂದಿದ್ದು ನಿಜವೆಂದು ಒಪ್ಪಿಕೊಂಡಿದ್ದರು. ಈ ಹೇಳಿಕೆಯನ್ನು ದಾಖಲಿಸಿಕೊಂಡಿದ್ದ ಪೀಠ, ಮಹಿಳೆ ದೂರು ನೀಡಲು ಬಂದಾಗ ಪೊಲೀಸ್ ಅಧಿಕಾರಿ ಅದನ್ನು ಡೈರಿಯಲ್ಲಿ ದಾಖಲಿಸಿಲ್ಲ. ಹಾಗೆಯೇ, ಎಫ್ಐಆರ್​ ಅನ್ನೂ ದಾಖಲಿಸಿಲ್ಲ. ಒಂದು ವೇಳೆ ಎಫ್ಐಆರ್ ದಾಖಲಿಸಿದ ಬಳಿಕ ಪ್ರಕರಣ ಠಾಣೆಯ ವ್ಯಾಪ್ತಿಗೆ ಬಾರದಿದ್ದರೆ ಅದನ್ನು ಸಂಬಂಧಿಸಿದ ಠಾಣೆಗೆ ವರ್ಗಾಯಿಸಬಹುದಿತ್ತು. ಆದರೆ, ಪೊಲೀಸರು ಈ ಯಾವ ಕೆಲಸವನ್ನೂ ಮಾಡಿಲ್ಲ. ಆದ್ದರಿಂದ ಕರ್ತವ್ಯಲೋಪ ಎಸಗಿರುವ ಅಧಿಕಾರಿ ಠಾಣೆಯ ಮುಂಭಾಗದ ರಸ್ತೆಯನ್ನು ಒಂದು ವಾರ ಸ್ವಚ್ಛಗೊಳಿಸಬೇಕು ಎಂದು ತೀರ್ಪು ನೀಡಿದೆ.

ಇದೇ ವೇಳೆ ಠಾಣಾಧಿಕಾರಿ ತನ್ನ ಕರ್ತವ್ಯ ಲೋಪಕ್ಕೆ ಬೇಷರತ್ ಕ್ಷಮೆ ಯಾಚಿಸಿದ್ದರೂ ನ್ಯಾಯಾಲಯ ಅದನ್ನು ಒಪ್ಪಿಕೊಂಡಿಲ್ಲ. ಬದಲಿಗೆ, ಜಿಲ್ಲೆಯ ಎಲ್ಲ ಪೊಲೀಸ್ ಸಿಬ್ಬಂದಿಗೆ ಎಫ್ಐಆರ್ ದಾಖಲಿಸುವ ಕುರಿತು ಅರಿವು ಮೂಡಿಸಲು ಕಾರ್ಯಾಗಾರ ಆಯೋಜಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News