×
Ad

ದಿಲ್ಲಿ ರೈತರ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ಅರೆಬೆತ್ತಲೆ ಧರಣಿ: ಸರಕಾರಕ್ಕೆ ಧಿಕ್ಕಾರ ಕೂಗಿದ ರೈತರು

Update: 2020-12-24 19:45 IST

ಬೆಂಗಳೂರು, ಡಿ.24: ಹೊಸದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಧರಣಿ 9ನೆ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೂರಾರು ರೈತರು ಅರೆಬೆತ್ತಲೆಯಾಗಿ ಬಾರುಕೋಲು ಬೀಸುವ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಚಳವಳಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕೇಂದ್ರ ಸರಕಾರ ದಿಲ್ಲಿ ರೈತ ಚಳುವಳಿಯನ್ನು ದಿಕ್ಕು ತಪ್ಪಿಸಲು ವಾಮಮಾರ್ಗಗಳನ್ನು ಅನುಸರಿಸುತ್ತಿದೆ. ರೈತರನ್ನು ಬೀದಿಗೆ ತಳ್ಳಿ ರೈತ ದಿನಾಚರಣೆ ಮಾಡುವುದು ಕೇಂದ್ರ ಸರಕಾರಕ್ಕೆ ಶೋಭೆ ತರುವುದಿಲ್ಲ, ಸುಗ್ರಿವಾಜ್ಞೆ 3 ಕಾಯ್ದೆಗಳಿಂದ ರೈತರಿಗೆ ಮಾರಕ ಪರಿಣಾಮ ಎಂದು ಬಿಜೆಪಿ ಸಹ ಸಂಘಟನೆಯ ಭಾರತೀಯ ಕಿಸಾನ್ ಸಂಘ ಹಾಗೂ ಸ್ವದೇಶಿ ಜಾಗರಣ ಮಂಚ್ ಬಹಿರಂಗವಾಗಿ ಹೋರಾಟಕ್ಕಿಳಿದಿದೆ ಎಂದರು.

ಆದರೂ ಇದನ್ನು ಗಮನಿಸದೆ ಕೇಂದ್ರದ ಮಂತ್ರಿಗಳು ಕಾಯ್ದೆಗಳು ರೈತರಿಗೆ ಹೆಚ್ಚಿನ ಅನುಕೂಲ ಎಂದು ಬಿಂಬಿಸುತ್ತಿದ್ದಾರೆ. ಕಾರ್ಪೋರೇಟ್ ಕಂಪನಿಗಳ ಮರ್ಜಿಯಲ್ಲಿ ಕಾನೂನುಗಳು ರಚನೆಯಾಗುತ್ತಿವೆ. ಸರಕಾರಗಳು ಜಾರಿ ಮಾಡುವ ಕೆಲಸ ಮಾತ್ರ ಮಾಡುತ್ತಿದೆ, ದುಡಿಯುವ ವರ್ಗ, ಕೂಲಿ ಕಾರ್ಮಿಕರು, ರೈತರು, ಕಾರ್ಖಾನೆ ಕಾರ್ಮಿಕರನ್ನು ಕಂಪನಿಗಳ ಗುಲಾಮರಾಗಿ ಮಾಡಲು ಇಂಥ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಧಾನಿಯವರು ಕಿಸಾನ್ ಸಮ್ಮಾನ್ ಯೋಜನೆ ಹಣವನ್ನು ಬಜೆಟ್‍ನಲ್ಲಿ ಘೋಷಿಸಿ ಮೂರು ಬಾರಿ ಪ್ರಚಾರ ಪಡೆದಿದ್ದಾರೆ. ಈಗ ರೈತರ ಕಣ್ಣಿಗೆ ಮಣ್ಣೆರಚಲು ಮುಂದಾಗುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ದರೆ ಹೋರಾಟ ನಿರತ ರೈತ ಮುಖಂಡರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿ ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಕೇಂದ್ರ ಸರಕಾರ ಕಬ್ಬು ಬೆಳೆಗಾರರಿಗೆ 3,500 ಕೋಟಿ ರೂ.ಬಿಡುಗಡೆ ಎಂಬುದು ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ರಫ್ತು ಮಾಡಲು ಸಹಾಯಕವಾಗಿದೆ, ರೈತರಿಗಲ್ಲ. ಇದನ್ನು ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಎಂದು ಬಿಂಬಿಸಲಾಗುತ್ತಿದೆ. ಇದು ರೈತರ ಸರಕಾರ ಎಂದು ಹೇಳುತ್ತಿದ್ದಾರೆ. 30 ರೈತರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದರೂ ಸರಕಾರ ಗಂಭೀರವಾಗಿ ಚಿಂತಿಸುತ್ತಿಲ್ಲ, ಇದು ರೈತರ ಬಲಿ ಸರಕಾರವಾಗಿದೆ ಎಂದು ಅವರು ಕಿಡಿಗಾರಿದರು.

ಹೊಡಿರಪ್ಪ ಹೊಡೆಯಿರಿ, ಸರಕಾರಕ್ಕೆ ಬಾರುಕೋಲುನಿಂದ ಹೊಡೆಯಿರಿ, ರೈತರನ್ನು ಬೆತ್ತಲೆ ಮಾಡಿದ ಸರಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಇಂದಿನ ರೈತ ಹೋರಾಟವನ್ನು ಬೆಂಬಲಿಸಿ ಅಖಿಲ ಭಾರತ ವಕೀಲರ ಸಂಘ 17 ಸಾವಿರ ರೂಪಾಯಿ ದೇಣಿಗೆ ನೀಡಿದರು.

ಅಖಂಡ ಕರ್ನಾಟಕ ರೈತ ಸಂಘದ ಸುಧೀರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವೀರಣ್ಣಗೌಡ, ಗದಗ್, ಶಿವಮೊಗ್ಗದ ದೇವಕುಮಾರ್ ಮಾತನಾಡಿದರು. ಸಿಐಟಿಯು ಕಾರ್ಯದರ್ಶಿ ಕುಮಾರಿ, ಸಿರಿಮನೆ ನಾಗರಾಜ್, ಹತ್ತಳ್ಳಿ ದೇವರಾಜ್, ಪ್ರಾಂತ ರೈತ ಸಂಘದ ಯಶವಂತ, ರೈತ ಮುಖಂಡ ಈರಣ್ಣ ಕಿರಗಸೂರು, ಶಂಕರ್ ಭಾಗ್ಯರಾಜ್, ಎಂ.ಬಿ.ಚೇತನ್, ಬರಡನಪುರ ನಾಗರಾಜ್ ಮುಂತಾದವರಿದ್ದರು.

ಹೊಸದಿಲ್ಲಿಗೆ ಹೊರಟ ರೈತರ ತಂಡ

ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗವಹಿಸಲು ರಾಜ್ಯದಿಂದ ಬಡಗಲಪುರ ನಾಗೇಂದ್ರ ನೇತತ್ವದಲ್ಲಿ ಆರು ಮಂದಿ ರೈತರ ತಂಡ ಗುರುವಾರ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿತು. ನಾಳೆ ಸಹ ರಾಷ್ಟ್ರ ರಾಜಧಾನಿಗೆ ಕೆಲ ರೈತ, ದಲಿತ, ಕಾರ್ಮಿಕ ಮುಖಂಡರು ಪ್ರಯಾಣ ಬೆಳೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News