ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು: ವಿದೇಶಿ ಪ್ರಜೆಗಳಿಬ್ಬರ ಬಂಧನ, 1.07 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

Update: 2020-12-24 14:20 GMT

ಬೆಂಗಳೂರು, ಡಿ.24: ಹೊಸವರ್ಷದ ಸಂದರ್ಭದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಡ್ರಗ್ಸ್ ಜಾಲವೊಂದನ್ನು ಭೇದಿಸಿರುವ ಪೂರ್ವ ವಿಭಾಗದ ಪೊಲೀಸರು, ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿ 1 ಕೋಟಿ 7 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಗುರುವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ನೈಜೀರಿಯಾ ದೇಶದ ಡಾಮಿನಿಕ್(39), ಒಮೆಮಾ(40) ಎಂಬವರು ಬಂಧಿತರು ಎಂದು ಹೇಳಿದರು.

ಡ್ರಗ್ಸ್ ದಂಧೆ ವಿರುದ್ಧ ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಅದರಂತೆ ಬೈಯಪ್ಪನಹಳ್ಳಿಯ ಸಿ.ವಿ.ರಾಮನ್ ನಗರ, ಬಾಗ್ಮನೆ ಟೆಕ್‍ಪಾರ್ಕ್ ಹಿಂಭಾಗ, ಕೃಷ್ಣಪ್ಪ ಗಾರ್ಡನ್, ಟೀಸ್ಟಾಲ್ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳಿಬ್ಬರು ಡಾರ್ಕ್‍ನೆಟ್ ಮೂಲಕ ಯುನೈಟೆಡ್ ಕಿಂಗ್‍ಡಮ್ ಲೀಡ್ಸ್‍ನಿಂದ ಮಾದಕ ವಸ್ತುಗಳನ್ನು ಪಡೆದು ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಇವರಿಂದ 1 ಕೋಟಿ 7 ಲಕ್ಷ ರೂ ಮೌಲ್ಯದ 3,300 ಎಂಡಿಎಂಎ ಎಕ್ಸೆಟೆನ್ಸಿ ಮಾತ್ರೆಗಳು, 600 ಗ್ರಾಂ ತೂಕದ ಟ್ಯಾಬ್ಲೆಟ್ ಪೌಡರ್, ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ನೈಜೀರಿಯಾ ಪ್ರಜೆಗಳಾಗಿದ್ದು, ತಮ್ಮ ಬಳಿ ಸೂಕ್ತ ಪಾಸ್‍ಪೋರ್ಟ್, ವೀಸಾಗಳನ್ನು ಹೊಂದಿಲ್ಲ. ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಅಕ್ರಮವಾಗಿ ನೆಲೆಸಿದ್ದರು. ಐಷಾರಾಮಿ ಜೀವನ ಮೋಜು ಮಾಡಲು ಹೊರ ದೇಶದಿಂದ ಮಾದಕ ವಸ್ತುಗಳನ್ನು ತರಿಸಿ ರಾಜ್ಯದಲ್ಲಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಬಹುಮಾನ: ಪ್ರಕರಣವನ್ನು ಭೇದಿಸಿರುವ ಬೈಯಪ್ಪನಹಳ್ಳಿ ಪೊಲೀಸರ ತಂಡಕ್ಕೆ 40 ಸಾವಿರ ರೂ. ನಗದು ಬಹುಮಾನ, ಪ್ರಶಂಸನಾ ಪತ್ರ ನೀಡಿ ಆಯುಕ್ತ ಕಮಲ್ ಪಂತ್ ಅವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪೂರ್ವ ವಿಭಾಗದ ಅಪರ ಪೊಲೀಸ್ ಆಯುಕ್ತ ಮುರುಗನ್, ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News