×
Ad

ಚಂದ್ರಯಾನ-2 ಮೊದಲ ಹಂತದ ದತ್ತಾಂಶ ಬಿಡುಗಡೆ ಮಾಡಿದ ಇಸ್ರೋ

Update: 2020-12-25 18:23 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.25: ದೇಶದ ಮಹಾತ್ವಾಕಾಂಕ್ಷಿಯ ಮಿಷನ್ ಆಗಿದ್ದ ಚಂದ್ರಯಾನ-2ರ ಮೊದಲ ಹಂತದ ದತ್ತಾಂಶವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದೆ.

ಚಂದ್ರಯಾನ-2 ಬಾಹ್ಯಾಕಾಶ ನೌಕಾ ಯಾನ 2019 ಜುಲೈ 22ರಂದು ಆರಂಭವಾಗಿತ್ತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆರ್ಬಿಟರ್, ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಒಳಗೊಂಡ ‘ಚಂದ್ರಯಾನ-2' ಉಪಕರಣಗಳನ್ನು ಹೊತ್ತ ಜಿಎಸ್‍ಎಸ್‍ವಿ ಮಾರ್ಕ್ 3 ರಾಕೆಟ್ ಉಡಾವಣೆ ಆಗಿತ್ತು. ಆದರೆ, ಸೆಪ್ಟೆಂಬರ್ ನಲ್ಲಿ ಚಂದ್ರನಲ್ಲಿ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಯತ್ನ ವಿಫಲಗೊಂಡಿತ್ತಾದರೂ, ಎಂಟು ವೈಜ್ಞಾನಿಕ ಸಾಧನಗಳನ್ನು ಹೊಂದಿರುವ ಆರ್ಬಿಟರ್ ಚಂದ್ರನ ಕಕ್ಷೆ ಸೇರಿತ್ತು.

ಎಲ್ಲ ಪ್ರಯೋಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಲಭ್ಯವಿರುವ ದತ್ತಾಂಶದಿಂದ ಉಡಾವಣೆ ಪೂರ್ವದಲ್ಲಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಮರ್ಥವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಇಸ್ರೋ ತಿಳಿಸಿದ್ದು, ಬೆಂಗಳೂರು ಸಮೀಪದಲ್ಲಿರುವ ಇಂಡಿಯನ್ ಸ್ಪೇಸ್ ಸೈನ್ಸ್ ಡೇಟಾ ಸೆಂಟರ್ ನಲ್ಲಿ (ಐಎಸ್‍ಎಸ್‍ಡಿಸಿ), ಚಂದ್ರಯಾನ-2 ಮಿಷನ್ ದತ್ತಾಂಶ ಸಂಗ್ರಹಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಚಂದ್ರಯಾನ-2 ದತ್ತಾಂಶವು ಪ್ಲಾನೆಟರಿ ಡೇಟಾ ಸಿಸ್ಟಂ-4 (ಪಿಡಿಎಸ್4) ಮಾನದಂಡದಲ್ಲಿರಬೇಕು. ಅದನ್ನು ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ರಿವ್ಯೂ ಮಾಡಬೇಕಾಗುತ್ತದೆ. ಬಳಿಕ ಜಾಗತಿಕ ವೈಜ್ಞಾನಿಕ ಸಮುದಾಯ ಹಾಗೂ ಸಾರ್ವಜನಿಕರಿಗೆ ಹಂಚಿಕೊಳ್ಳಬಹುದಾಗಿದೆ ಎಂದು ಇಸ್ರೋ ತಿಳಿಸಿದೆ. ಹೀಗಾಗಿ, ಐಎಸ್‍ಎಸ್‍ಡಿಸಿ ಆತಿಥ್ಯದ ಪ್ರದಾನ್ ಪೋರ್ಟಲ್‍ನಲ್ಲಿ ಚಂದ್ರಯಾನ-2 ದತ್ತಾಂಶವನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News