ಬೆಂಗಳೂರು: ಅಂಬೇಡ್ಕರ್ ಪುತ್ಥಳಿ ಬಳಿ 'ಮನುಸ್ಮೃತಿ' ದಹಿಸಿದ ಬಹುಜನ ಮಹಾಸಭಾ
ಬೆಂಗಳೂರು, ಡಿ. 25: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಮಸೂದೆ ನೆಪದಲ್ಲಿ 'ಮನುಧರ್ಮ'ದ ಆಚರಣೆಗಳನ್ನು ತನ್ನ ಗುಪ್ತ ಅಜೆಂಡ ಮೂಲಕ ಜಾರಿಗೊಳಿಸಲು ಹುನ್ನಾರ ನಡೆಸಿದೆ ಎಂದು ಬಹುಜನ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಲ್ಲೇಶ್ ಇಂದಿಲ್ಲಿ ದೂರಿದ್ದಾರೆ.
ಶುಕ್ರವಾರ 1923ರ ಡಿಸೆಂಬರ್ 25ರಂದು ಅಸ್ಪೃಶ್ಯರನ್ನು ಕೀಳಾಗಿ ಕಂಡ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ದಹಿಸಿದ ನೆನಪಿಗಾಗಿ ಇಲ್ಲಿನ ತಿಲಕ್ ನಗರದಲ್ಲಿರುವ ಅಂಬೇಡ್ಕರ್ ಪುತ್ಥಳಿಯ ಬಳಿ 'ಮನುಸ್ಮೃತಿ'ಯನ್ನು ದಹಿಸಿದ ಬಳಿಕ ಮಾತನಾಡಿದ ಅವರು, ಮನುಸ್ಮೃತಿಯಲ್ಲಿನ ಮಾನವ ವಿರೋಧಿ ಅಂಶಗಳನ್ನು ನಾವು ಬದುಕಿರುವವರೆಗೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಜಾತಿ-ಧರ್ಮದ ಹೆಸರಿನಲ್ಲಿ ಅಸ್ಪೃಶ್ಯ ಮತ್ತು ಶೂದ್ರರನ್ನು ಒಡೆದು ಆಳಲಾಗುತ್ತಿದೆ. ಅಲ್ಲದೆ, ಅಸ್ಪೃಶ್ಯರು ವಿದ್ಯೆ, ಆಸ್ತಿ ಹೊಂದುವುದಕ್ಕೆ ಮನುಸ್ಮೃತಿ ವಿರೋಧಿಯಾಗಿದೆ ಎಂದ ಅವರು, ಸಂವಿಧಾನ ಶೋಷಿತರ ಸ್ವಾಭಿಮಾನದ ಬದುಕುವ ಹಕ್ಕನ್ನು ಕಲ್ಪಿಸಿದೆ. ವೈದಿಕ ಸಾಂಸ್ಕೃತಿಕ ಅಂಧಾಚರಣೆಗಳು ಅಪರಾಧ ಎಂಬುದನ್ನು ಅಂಬೇಡ್ಕರ್ ದೇಶಕ್ಕೆ ಎತ್ತಿ ತೋರಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರಕಾರ ಜಾರಿಗೆ ತರಲು ಮುಂದಾಗಿರುವ ಜನವಿರೋಧಿ ಗೋಹತ್ಯೆ ನಿಷೇಧ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು, ಬಿಜೆಪಿ ಸರಕಾರ ಮನುಸ್ಮೃತಿ ಪ್ರೇರಿತ ವಿಚಾರಧಾರೆಗಳನ್ನು ಜನರ ಮೇಲೆ ಹೇರಲು ಮುಂದಾದರೆ ಅವುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.