ಗೋವುಗಳ ಮೇಲಿರುವ ಪ್ರೀತಿ ಈ ಹಿರಿಯರ ಮೇಲೆ ಯಾಕಿಲ್ಲ?

Update: 2020-12-28 04:44 GMT

‘ಹಳೆ ಬೇರು, ಹೊಸ ಚಿಗುರು, ಮರ ಸೊಬಗು’ ಎನ್ನುವ ಕವಿ ಸಾಲು, ಬದುಕನ್ನು ಉದ್ಧರಿಸಿ ಬರೆದಿರುವುದು. ಹಿರಿಯರನ್ನು ಮರೆತ ಸಮಾಜಕ್ಕೆ ಯಾವ ಭವಿಷ್ಯವೂ ಇಲ್ಲ. ನಾವಿಂದು ಏನನ್ನು ಅನುಭವಿಸುತ್ತಿದ್ದೇವೆಯೋ ಅದರಲ್ಲಿ ನಮ್ಮ ಹಿರಿಯರ ಪಾಲಿದೆ. ಅವರ ಕೈಯಿಂದ ಪಡೆದ ರಿಲೇ ಕೋಲನ್ನು ನಾವು ಭವಿಷ್ಯದ ಮಕ್ಕಳಿಗೆ ದಾಟಿಸಬೇಕಾಗಿದೆ. ಬೇರನ್ನು ನಿರ್ಲಕ್ಷಿಸಿ ಕಾಂಡ ಬದುಕುವುದು ಸಾಧ್ಯವಿಲ್ಲ. ಆದುದರಿಂದ ಹೊಸ ಪೀಳಿಗೆಗೆ ತಮ್ಮ ಹಿರಿಯರ ಕುರಿತ ಹಲವು ಋಣಗಳಿವೆ. ಹೊಣೆಗಾರಿಕೆ, ಜವಾಬ್ದಾರಿಗಳಿವೆ. ಆದರೆ ದುರದೃಷ್ಟಕ್ಕೆ ಇಂದು ಹಿರಿಯರನ್ನು ನಾವು ವೃದ್ಧರು ಎಂದು ಕರೆಯುತ್ತೇವೆ. ಸಮಾಜದ ಪಾಲಿನ ಹೊರೆ ಎಂದು ಭಾವಿಸಿದ್ದೇವೆ.

ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ವೃದ್ಧರು ಬಹುದೊಡ್ಡ ಸಮಸ್ಯೆಯಾಗಿದ್ದಾರೆ. ಒಂದು ಮಗು ಎನ್ನುವ ಜನಸಂಖ್ಯಾ ನೀತಿಯಿಂದಾಗಿ ಚೀನಾದಲ್ಲಿ ಯುವಕರ ಸಂಖ್ಯೆ ಇಳಿಕೆಯಾಗಿ ವೃದ್ಧರ ಸಂಖ್ಯೆ ಏರಿಕೆಯಾಗಿದೆ. ಆ ದೇಶಕ್ಕೆ ಅವರೊಂದು ಹೊರೆಯಾಗಿ ಪರಿಣಮಿಸಿದ್ದಾರೆ. ಕಳೆದ ಕೊರೋನ ಅವಧಿಯಲ್ಲಿ ತನ್ನ ಹೊರೆಯನ್ನು ಇಳಿಸಿಕೊಳ್ಳಲು ಚೀನಾ ಸೇರಿದಂತೆ ಹಲವು ಪಾಶ್ಚಾತ್ಯ ದೇಶಗಳು ಸರ್ವ ಪ್ರಯತ್ನ ನಡೆಸಿದವು. ಪರಿಣಾಮವಾಗಿ ಈ ಅವಧಿಯಲ್ಲಿ ಸಾಲು ಸಾಲಾಗಿ ವೃದ್ಧರು ಮೃತ್ಯುಗೀಡಾದರು. ಕೊರೋನದಿಂದ ಈ ವೃದ್ಧರು ಮೃತರಾದರೋ ಅಥವಾ ಈ ವೃದ್ಧರನ್ನು ಕೊಂಡೊಯ್ಯುವುದಕ್ಕಾಗಿಯೇ ಕೊರೋನ ಆಗಮಿಸಿತೋ ಎನ್ನುವುದನ್ನು ಕಾಲವೇ ಹೇಳಬೇಕು. ಒಟ್ಟಿನಲ್ಲಿ, ಹಲವು ದೇಶಗಳು ತನಗೆ ಭಾರವಾದ ವೃದ್ಧರನ್ನು ಇಳಿಸುವುದಕ್ಕೆ ಕೊರೋನವನ್ನು ನೆಪವಾಗಿ ಬಳಸಿಕೊಂಡಿರುವುದು ಕಟು ವಾಸ್ತವ. ಹಿರಿಯ ನಾಗರಿಕರ ಕುರಿತಂತೆ ಭಾರತ ಅಗಾಧ ಗೌರವವನ್ನು ಹೊಂದಿದೆ. ಹಿರಿಯರನ್ನು ಗೌರವಿಸುವುದು ಸಮಾಜದ ಬಹುಮುಖ್ಯ ಭಾಗವಾಗಿದೆ. ಆದರೆ ಬರೇ ಗೌರವದಿಂದಷ್ಟೇ ಅವರು ಉತ್ತಮ ಬದುಕನ್ನು ಕಾಣುವುದಕ್ಕೆ ಸಾಧ್ಯವಿಲ್ಲ ಇಂದು ಅವರನ್ನು ಗೌರವಯುತವಾಗಿ ವೃದ್ಧಾಶ್ರಮಕ್ಕೆ ಸೇರಿಸುವ ಪೀಳಿಗೆಯೊಂದು ಸೃಷ್ಟಿಯಾಗಿದೆ. ಇದಕ್ಕೆ ಮುಖ್ಯ ಕಾರಣ, ಒಂದು ಕಾಲದಲ್ಲಿ ಕುಟುಂಬವನ್ನು ಸಾಕಿ ಸಲಹಿದ ಜೀವ ವೃದ್ಧಾಪ್ಯದಲ್ಲಿ ಆರ್ಥಿಕವಾಗಿ ಸಶಕ್ತನಾಗಿರದೇ ಇರುವುದು.

ಇಂದು ಗೋವಿನ ಜೊತೆಗೆ ಇರುವ ಪ್ರೀತಿಯನ್ನು ಮಕ್ಕಳು ತಮ್ಮ ತಂದೆ ತಾಯಿಗಳ ಕುರಿತಂತೆ ತೋರುವುದಿಲ್ಲ. ಅನುಪಯುಕ್ತ ಗೋವಿಗೆ ಗೋಶಾಲೆಗಳನ್ನು ತೆರೆಯಲು ಕೋಟ್ಯಂತರ ರೂಪಾಯಿ ವ್ಯಯಿಸುವ ಸರಕಾರ, ವೃದ್ಧರ ಕೊನೆಯ ದಿನಗಳನ್ನು ಅವರವರ ಮನೆಗಳಲ್ಲೇ ಉತ್ತಮವಾಗಿಸುವುದಕ್ಕೆ ಬೇಕಾಗಿರುವ ಕ್ರಮಗಳನ್ನು ತೆಗೆದುಕೊಳ್ಳಲು ಇನ್ನೂ ಮಾನಸಿಕವಾಗಿ ಸಿದ್ಧವಾಗಿಲ್ಲ. ಆ ಹೊಮೆಯನ್ನು ಅವರ ಕುಟುಂಬಕ್ಕೆ ಹೊರಿಸಿ ಬಿಟ್ಟಿದೆ. ಈ ದೇಶದಲ್ಲಿ ಬದುಕಿರುವ ಎಲ್ಲ ವೃದ್ಧರಿಗೂ ಸಣ್ಣದೊಂದು ಪಿಂಚಣಿಯನ್ನು ಒದಗಿಸಲು ಸರಕಾರ ಮುಂದಾದರೆ, ಅದು ಎಷ್ಟೋ ಹಿರಿಯರ ಬದುಕನ್ನು ಸಹನೀಯಗೊಳಿಸಬಹುದು. ಆದರೆ ಗೋವುಗಳ ದೇಹದಲ್ಲಿ ಬದುಕಿರುವ ಮುಕ್ಕೋಟಿ ದೇವತೆಗಳು ಈ ಹಿರಿಯರ ದೇಹದಲ್ಲೂ ಇದ್ದಾರೆ ಎನ್ನುವುದನ್ನೂ ಯಾರೂ ಪ್ರತಿಪಾದಿಸದಿರುವ ಕಾರಣಕ್ಕಾಗಿ ಅವರು ಸಹನೀಯ ಬದುಕಿಗೆ ಅರ್ಹರಲ್ಲ ಎಂದು ಸರಕಾರ ಭಾವಿಸಿದಂತಿದೆ. ಆದುದರಿಂದಲೇ, ವೃದ್ಧಾಶ್ರಮಗಳೆಂಬ ಕಸಾಯಿಖಾನೆಗೆ ಅನಿವಾರ್ಯವೆಂಬಂತೆ ನೂಕಲ್ಪಡುತ್ತಿರುವ ವೃದ್ಧರ ಕುರಿತಂತೆ ಸರಕಾರ ಕಣ್ಣಿದ್ದೂ ಕುರುಡಾಗಿದೆ.

ಈ ದೇಶದಲ್ಲಿ ಕೇವಲ 10ಶೇ. ದಷ್ಟು ಹಿರಿಯ ನಾಗರಿಕರು ಮಾತ್ರ ನಿಯಮಿತ ಮತ್ತು ನ್ಯಾಯಸಮ್ಮತ ಪಿಂಚಣಿ ಪಡೆಯುತ್ತಿದ್ದಾರೆ. ಇದರಲ್ಲಿ ಬಹುತೇಕರು ಸರಕಾರಿ ಇಲಾಖೆಯಲ್ಲಿ , ಸಶಸ್ತ್ರ ಪಡೆಗಳಲ್ಲಿ ಅಥವಾ ಇದೇ ರೀತಿಯ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು. ಉಳಿದ 90ಶೇ. ದಷ್ಟು ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯವೇ ದೊರಕುತ್ತಿಲ್ಲ ಅಥವಾ ದೊರಕಿದರೂ ಅತ್ಯಲ್ಪ ಪ್ರಮಾಣದಲ್ಲಿದೆ. ಅಸಂಘಟಿತ ಕ್ಷೇತ್ರದ ಹಿರಿಯ ನಾಗರಿಕರಿಗೆ ಕೆಲವು ಮೂಲಭೂತ ಸೌಕರ್ಯ ದೊರಕಿಸಿಕೊಡುವ ಕೇಂದ್ರ ಸರಕಾರದ ಪ್ರಮುಖ ಯೋಜನೆ ‘ದಿ ನ್ಯಾಷನಲ್ ಸೋಶಿಯಲ್ ಅಸಿಸ್ಟೆನ್ಸ್ ಪ್ರೋಗ್ರಾಂ(ಎನ್‌ಎಸ್‌ಎಪಿ)-ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ’. ಅಸಂಘಟಿತ ಕ್ಷೇತ್ರದ ಸುಮಾರು ಎಂಟು ಕೋಟಿ ಹಿರಿಯ ನಾಗರಿಕರಲ್ಲಿ ಈ ಯೋಜನೆಯ ಫಲಾನುಭವಿಗಳು 2 ಕೋಟಿಯಷ್ಟು ಮಾತ್ರ. ಈ ಯೋಜನೆಗೆ 2015-16ರಲ್ಲಿ 8,516 ಕೋಟಿ ರೂ,2020-21ರ ಬಜೆಟ್‌ನಲ್ಲಿ 9,917 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಹಣದುಬ್ಬರದ ಪ್ರಮಾಣಕ್ಕೆ ಸಮವಾಗಿ ಅನುದಾನ ಹಂಚಿಕೆಯಾಗಿಲ್ಲ ಎಂಬುದು ಈ ಅಂಕಿಅಂಶದಿಂದ ಸ್ಪಷ್ಟವಾಗುತ್ತದೆ. ನೆರವಿನ ಅತ್ಯಗತ್ಯವಿರುವ ಹಿರಿಯ ನಾಗರಿಕರಿಗೆ ಪಿಂಚಣಿ ದೊರಕುತ್ತಿಲ್ಲ. ಈ ಹಿಂದೆ ಪಿಂಚಣಿ ಪಡೆಯುತ್ತಿದ್ದ ಹಿರಿಯ ನಾಗರಿಕರಿಗೂ ಈಗ ಆಧಾರ್ ಕಾರ್ಡ್ ಒದಗಿಸುವ , ಬಯೊಮೆಟ್ರಿಕ್ ಗುರುತು ಪ್ರಕ್ರಿಯೆಯ ನಿಯಮ, ಹಲವು ಅವ್ಯವಸ್ಥೆಗಳು ತೊಡಕಾಗಿ ಪರಿಣಮಿಸಿವೆೆ. ಎನ್‌ಎಸ್‌ಎಪಿ ಹೊರತಾಗಿಯೂ ಅಸಂಘಟಿತ ವಲಯದ ಹಲವು ಉದ್ಯೋಗಿಗಳಿಗೆ ಇತರ ಕೆಲವು ಯೋಜನೆಗಳಿವೆ. ಆದರೆ ಇವುಗಳಿಗೆ ಒದಗಿಸಿರುವ ಬಜೆಟ್ ಅನುದಾನ ಅತ್ಯಲ್ಪವಾಗಿದೆ.

ಈ ಹಿನ್ನೆಲೆಯಲ್ಲಿ, ಸುಮಾರು ಆರು ಕೋಟಿ ಹಿರಿಯ ನಾಗರಿಕರು ಪಿಂಚಣಿಗಾಗಿ ಇನ್ನೂ ಕಾಯಬೇಕಾಗಿದೆ. ಸಣ್ಣ ರೈತರು ಸರಕಾರದ ಪಿಂಚಣಿ ಯೋಜನೆಯ ಪ್ರಯೋಜನದಿಂದ ಬಹುತೇಕ ವಂಚಿತರಾಗಿದ್ದಾರೆ. ಎನ್‌ಎಸ್‌ಎಪಿ ಯೋಜನೆಯಲ್ಲಿ ಹಿರಿಯ ನಾಗರಿಕರನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. 60ರಿಂದ-79 ವರ್ಷ ಮತ್ತು 80 ವರ್ಷ ಹಾಗೂ ಮೇಲ್ಪಟ್ಟವರು. ಎರಡನೇ ವಿಭಾಗದಲ್ಲಿ ಬರುವವರಿಗೆ ಕೇಂದ್ರ ಸರಕಾರ ಮಾಸಿಕ 500 ರೂ. ಒದಗಿಸುತ್ತಿದೆ. ಆದರೆ ಪ್ರಥಮ ವಿಭಾಗದಲ್ಲಿ ಬರುವ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚು. ಈ ವಿಭಾಗದವರಿಗೆ ಕೇಂದ್ರ ಸರಕಾರದ ಕೊಡುಗೆ ಮಾಸಿಕ 200 ರೂ. ಮಾತ್ರವಾಗಿದೆ. ಇಲ್ಲಿ ಗೋಶಾಲೆಗಳಿಗಾಗಿ ಕೋಟ್ಯಂತರ ಹಣವನ್ನು ವ್ಯಯಮಾಡಲಾಗುತ್ತದೆ. ಸರಕಾರದ ಹಿರಿಯ ಅಧಿಕಾರಿಗಳ, ರಾಜಕಾರಣಿಗಳ ವೇತನ, ಭತ್ತೆಗಳಲ್ಲಿ ನಿಯಮಿತವಾಗಿ (ವಾಡಿಕೆಯಂತೆ) ಭಾರೀ ಹೆಚ್ಚಳವಾಗುತ್ತದೆ. ದೇಶದಲ್ಲಿರುವ ಬಿಲಿಯಾಧೀಶ್ವರರ ಸಂಖ್ಯೆ ಈ ಹಿಂದಿಗಿಂತಲೂ ಹೆಚ್ಚಿರುವ ಈ ಸಂದರ್ಭದಲ್ಲೂ, ಸುಮಾರು 4 ದಶಕಗಳಿಂದ ಬೆಳಗ್ಗಿನಿಂದ ರಾತ್ರಿವರೆಗೆ ಅವಿರತ ದುಡಿದಿದ್ದ ಹಿರಿಯ ನಾಗರಿಕರಿಗೆ ಸರಕಾರ ನೀಡುತ್ತಿರುವ ಪಿಂಚಣಿ 200 ರೂ. ಮಾತ್ರ. ಇದು ಕೂಡಾ ನೆರವಿನ ಅಗತ್ಯವಿರುವ ಹಿರಿಯ ನಾಗರಿಕರಲ್ಲಿ ಕೇವಲ 27ಶೇ. ಜನರಿಗೆ ಮಾತ್ರ ಸಿಗುತ್ತಿದೆ. ಹಲವು ಬೇಡಿಕೆ, ಹಕ್ಕೊತ್ತಾಯ, ಪ್ರತಿಭಟನೆ, ಶಿಫಾರಸಿನ ಹೊರತಾಗಿಯೂ, 10 ವರ್ಷದ ಹಿಂದೆ ನಿಗದಿ ಮಾಡಿದ ಈ ಮೊತ್ತವನ್ನು ಪರಿಷ್ಕರಿಸಲಾಗಿಲ್ಲ.

ಇಂದಿನ ಸಂದರ್ಭಕ್ಕೆ ಲೆಕ್ಕ ಹಾಕಿದರೆ ಈ ಪಿಂಚಣಿಯ ವೌಲ್ಯ ಕೇವಲ 90 ರೂ. ಮಾತ್ರವಾಗಿದೆ. ಕೇಂದ್ರ ಸರಕಾರ ನೀಡುವ ಈ ಮೊತ್ತಕ್ಕೆ ರಾಜ್ಯ ಸರಕಾರಗಳೂ ಸ್ವಲ್ಪ ಅಂಶವನ್ನು ಭರಿಸುತ್ತವೆ. ಕೇರಳ, ಗೋವಾ, ದಿಲ್ಲಿಯಂತಹ ಕೆಲವು ಸಣ್ಣ ರಾಜ್ಯಗಳು ತಮ್ಮ ಪಾಲಿನ ಅಂಶವನ್ನು ಅಧಿಕಗೊಳಿಸುವ ಮೂಲಕ ಹಿರಿಯ ನಾಗರಿಕರಿಗೆ ಸುಮಾರು 2,000 ರೂ. ಪಿಂಚಣಿ ದೊರಕಿಸಿ ಕೊಟ್ಟಿವೆ. ಆದರೆ ಹಿರಿಯ ನಾಗರಿಕರ ಜನಸಂಖ್ಯೆ ಹೆಚ್ಚಿರುವ ಹಲವು ರಾಜ್ಯಗಳು ನೀಡುತ್ತಿರುವ ತನ್ನ ಪಾಲಿನ ದೇಣಿಗೆಯೂ ಕಡಿಮೆಯಾಗಿದೆ. ಕೆಲವು ರಾಜ್ಯಗಳಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪಿಂಚಣಿಯ ಮೊತ್ತವನ್ನು ಪರಿಷ್ಕರಿಸಲಾಗಿದೆ. ಈ ಅತ್ಯಲ್ಪ ಪಿಂಚಣಿಯೂ ಹಿರಿಯ ನಾಗರಿಕರಿಗೆ ಸಕಾಲಿಕವಾಗಿ ಲಭಿಸುತ್ತಿಲ್ಲ ಮತ್ತು ಇದನ್ನು ಪಡೆಯಲು ಸಾಕಷ್ಟು ಪ್ರಯತ್ನ ಪಡುವ ಜೊತೆಗೆ ಹಣವನ್ನೂ ವ್ಯಯಿಸಬೇಕಾಗುತ್ತದೆ. ಇಂದಿನ ದಿನದಲ್ಲಿರುವ ಕುಂದುಕೊರತೆ ಪರಿಹಾರ ವ್ಯವಸ್ಥೆ ಅಸಮರ್ಪಕವಾಗಿದೆ. ಗೋವುಗಳ ಹೊಣೆಗಾರಿಕೆಗಳನ್ನು ಆಯಾ ರೈತರಿಗೆ ಬಿಟ್ಟು, ಸರಕಾರ ನಮ್ಮ ನಡುವೆ ಇರುವ ಹಿರಿಯರ ಬದುಕನ್ನು ಉತ್ತಮಗೊಳಿಸಲು ಪ್ರಯತ್ನ ನಡೆಸಬೇಕಾಗಿದೆ. ಗೋಶಾಲೆಗಳ ಹಣ ಈ ನಿಟ್ಟಿನಲ್ಲಿ ವ್ಯಯವಾಗಬೇಕಾಗಿದೆ. ಇವರ ಆರೈಕೆಗಾಗಿ ಸರಕಾರ ಮೀಸಲಿಡುವ ಹಣದ ಪ್ರಮಾಣ ಹೆಚ್ಚಬೇಕು. ಬೇರು ಗಟ್ಟಿಯಾಗಿದ್ದರೆ ಮಾತ್ರ ಚಿಗುರು. ತನ್ನನ್ನು ಹಿಡಿದೆತ್ತಿ ನಿಲ್ಲಿಸಿದ ಬೇರನ್ನು ಮರೆತ ಮರ, ಹೊಸ ಚಿಗುರನ್ನು ಬಿಟ್ಟೀತಾದರೂ ಹೇಗೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News