ಬಾಕ್ಸಿಂಗ್ ಡೇ ಟೆಸ್ಟ್: ಉಮೇಶ್ ಯಾದವ್‌ಗೆ ಗಾಯ

Update: 2020-12-28 07:52 GMT

ಮೆಲ್ಬೋರ್ನ್: ಭಾರತದ ವೇಗದ ಬೌಲರ್ ಉಮೇಶ್ ಯಾದವ್ ಆಸ್ಟ್ರೇಲಿಯ ವಿರುದ್ಧ ದ್ವಿತೀಯ ಟೆಸ್ಟ್‌ನ ಮೂರನೇ ದಿನದಾಟದ ವೇಳೆ ಗಾಯದ ಸಮಸ್ಯೆ ಕಾಣಿಸಿಕೊಂಡ ಕಾರಣ ಮೈದಾನವನ್ನು ತೊರೆದರು. ಅವರು ಸ್ಕಾನಿಂಗ್‌ಗೆ ಒಳಗಾಗಲಿದ್ದಾರೆ.

33ರ ಹರೆಯದ ಯಾದವ್ ಬೌಲಿಂಗ್ ಮಾಡುತ್ತಿದ್ದಾಗಲೇ ಎಡಗಾಲಿನಲ್ಲಿ ನೋವು ಕಾಣಿಸಿಕೊಂಡ್ತಿು. ತಕ್ಷಣವೇ ವೈದ್ಯಕೀಯ ತಂಡವನ್ನು ಕರೆಸಲಾಯಿತು. ಬಳಿಕ ಅವರು ಕುಂಟುತ್ತಾ ಡ್ರೆಸ್ಸಿಂಗ್ ರೂಮ್‌ನತ್ತ ತೆರಳಿದರು. ಯಾದವ್ ಎಸೆದ ಇನಿಂಗ್ಸ್‌ನ 8ನೇ ಓವರ್‌ನ್ನು ಚೊಚ್ಚಲ ಪಂದ್ಯವನ್ನಾಡುತ್ತಿರುವ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಪೂರ್ಣಗೊಳಿಸಿದರು.

ಉಮೇಶ್ ಯಾದವ್ ತನ್ನ 4ನೇ ಓವರ್ ಬೌಲಿಂಗ್ ಮಾಡುತ್ತಿದ್ದಾಗ ಕಾಲಿನಲ್ಲಿ ನೋವು ಕಾಣಿಸಿಕೊಂಡಿದ್ದಾಗಿ ತಿಳಿಸಿದರು. ಅವರನ್ನು ಇದೀಗ ಸ್ಕಾನಿಂಗ್ ನಡೆಸಲು ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ವೈದ್ಯಕೀಯ ತಂಡ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಉಮೇಶ್ ಯಾದವ್ ಗಾಯದ ಸಮಸ್ಯೆ ಎದುರಿಸುವ ಮೊದಲು ಆಸ್ಟ್ರೇಲಿಯದ ಆರಂಭಿಕ ಆಟಗಾರ ಜೋ ಬರ್ನ್ಸ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದರು.

ಭಾರತವು ಈಗಾಗಲೇ ವೇಗದ ಬೌಲರ್‌ಗಳಾದ ಮುಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಅವರ ಸೇವೆಯಿಂದ ವಂಚಿತವಾಗಿದ್ದು, ಇದೀಗ ಯಾದವ್‌ಗೆ ಗಾಯದ ಸಮಸ್ಯೆ ಕಾಣಿಸಿಕೊಳ್ಳುವುದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಗಾಯಾಳುಗಳ ಪಟ್ಟಿ ಉದ್ದವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News