ಕೊರೋನ ಬಗ್ಗೆ ಹೊರಜಗತ್ತಿಗೆ ನೇರಪ್ರಸಾರ ಮಾಹಿತಿ: ಸಿಟಿಝನ್ ಜರ್ನಲಿಸ್ಟ್‌ಗೆ ಜೈಲು

Update: 2020-12-28 15:30 GMT
ಸಾಂದರ್ಭಿಕ ಚಿತ್ರ

ಬೀಜಿಂಗ್ (ಚೀನಾ), ಡಿ. 28: ಕಳೆದ ವರ್ಷದ ಕೊನೆಯಲ್ಲಿ ಚೀನಾದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಸ್ಫೋಟಗೊಂಡಾಗ, ಹೊಸ ಮಾದರಿಯ ಕಾಯಿಲೆಯ ಬಗ್ಗೆ ವುಹಾನ್ ನಗರದಿಂದ ನೇರಪ್ರಸಾರದ ವರದಿ ಮಾಡಿದ ನಾಗರಿಕ ಪತ್ರಕರ್ತೆ (ಸಿಟಿಝನ್ ಜರ್ನಲಿಸ್ಟ್) ಝಾಂಗ್ ಝಾನ್‌ಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅವರ ವಕೀಲ ಸೋಮವಾರ ಹೇಳಿದ್ದಾರೆ.

‘ಜಗಳ ಮಾಡಿರುವುದಕ್ಕಾಗಿ ಹಾಗೂ ಅಸ್ಥಿರತೆ ಉಂಟು ಮಾಡಿರುವುದಕ್ಕಾಗಿ’ ಶಾಂಘೈಯ ನ್ಯಾಯಾಲಯವೊಂದು ಕಿರು ವಿಚಾರಣೆಯ ಬಳಿಕ ಮಾಜಿ ವಕೀಲೆ ಝಾಂಗ್ ಝಾನ್‌ಗೆ ಜೈಲು ಶಿಕ್ಷೆ ವಿಧಿಸಿತು.

ಅವರ ನೇರಪ್ರಸಾರದ ವರದಿಗಳು ಮತ್ತು ಲೇಖನಗಳು ಫೆಬ್ರವರಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು ಹಾಗೂ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಯಿತು.

ಹೊಸ ಮಾದರಿಯ ಸಾಂಕ್ರಾಮಿಕವನ್ನು ರಹಸ್ಯವಾಗಿ ಇಟ್ಟುಕೊಳ್ಳಲು ಚೀನಾ ಪ್ರಯತ್ನಿಸುತ್ತಿದ್ದಾಗ, ಅದರ ಬಗ್ಗೆ ಹೊರಜಗತ್ತಿಗೆ ಮಾಹಿತಿ ನೀಡಿರುವುದಕ್ಕಾಗಿ ಚೀನಾವು ಈವರೆಗೆ 8 ಮಂದಿಯನ್ನು ಶಿಕ್ಷಿಸಿದೆ.

37 ವರ್ಷದ ಝಾಂಗ್ ಝಾನ್‌ರ ಆರೋಗ್ಯದ ಬಗ್ಗೆ ಕಳವಳ ಹರಡಿದೆ. ಅವರು ಜೂನ್ ತಿಂಗಳಲ್ಲಿ ಉಪವಾಸ ಮುಷ್ಕರ ಆರಂಭಿಸಿದ್ದಾರೆ. ಅಂದಿನಿಂದ ಅವರಿಗೆ ಮೂಗಿನ ಮೂಲಕ ಬಲವಂತವಾಗಿ ಆಹಾರ ತಿನ್ನಿಸಲಾಗುತ್ತಿದೆ.

ಶಿಕ್ಷೆಯ ಪ್ರಮಾಣವನ್ನು ಕೇಳಿ ಅವರು ಆಘಾತಗೊಂಡರು ಹಾಗೂ ಅವರ ತಾಯಿ ಬಿಕ್ಕಿ ಬಿಕ್ಕಿ ಅತ್ತರು ಎಂದು ಅವರ ವಕೀಲರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News