ತನಿಖಾ ಸಂಸ್ಥೆಯ ಮಹತ್ವ ಕುಸಿದಿದೆ: ಸಂಜಯ್ ರಾವತ್

Update: 2020-12-28 17:14 GMT

ಮುಂಬೈ, ಡಿ. 28: ರಾಜಕೀಯ ಅಧಿಕಾರದ ಆಟಕ್ಕೆ ತನಿಖಾ ಸಂಸ್ಥೆಗಳನ್ನು ಬಳಸುತ್ತಿರುವುದು ಹೆಚ್ಚಿರುವುದರಿಂದ ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳು ಮುಖ್ಯವಲ್ಲ ಎಂದು ಶಿವಸೇನೆಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ತನ್ನ ಪತ್ನಿಗೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದ ಬಳಿಕ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ. ರಾಜಕೀಯ ಹೋರಾಟವನ್ನು ಮುಖಾಮುಖಿಯಾಗಿ ಮಾಡಬೇಕು ಎಂದು ಘೋಷಿಸಿದ ಅವರು, ತಾನು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರೊಂದಿಗೆ ಮಾತನಾಡಿದ್ದೇನೆ. ಶಿವಸೇನೆ ತನ್ನದೇ ರೀತಿಯಲ್ಲಿ ಉತ್ತರ ನೀಡಲಿದೆ. ಭಯಪಡುವ ಅಗತ್ಯ ಇಲ್ಲ ಎಂದರು.

‘‘ಜಾರಿ ನಿರ್ದೇಶನಾಲಯ, ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆಯ ಮಹತ್ವ ಕುಸಿದಿದೆ. ಈ ಹಿಂದೆ ಈ ತನಿಖಾ ಸಂಸ್ಥೆಗಳು ಯಾವುದಾದರೂ ಕ್ರಮ ಕೈಗೊಂಡರೆ, ಏನೋ ಗಂಭೀರ ವಿಷಯ ಇದೆ ಎಂದು ಭಾವಿಸಲಾಗುತ್ತಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ರಾಜಕೀಯ ಪಕ್ಷಗಳು ತಮ್ಮ ಕೋಪವನ್ನು ಹೊರ ಹಾಕಿದಾಗ ಈ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿರುವಂತೆ ಕಾಣುತ್ತಿದೆ’’ ಎಂದು ಅವರು ಹೇಳಿದರು. 121 ಮಂದಿಯ ಹೆಸರಿರುವ ಬಿಜೆಪಿಯ ಫೈಲ್ ನನ್ನ ಬಳಿ ಇದೆ. ಇದರಲ್ಲಿ ಈ.ಡಿ. ಐದು ವರ್ಷಗಳ ಕಾಲ ತನಿಖೆ ನಡೆಸಬೇಕಾದ ಹೆಸರುಗಳೂ ಇವೆ. ತಾನು ಶೀಘ್ರದಲ್ಲಿ ಅದನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಿದ್ದೇನೆ ಎಂದು ಸಂಜಯ್ ರಾವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News