ಡ್ರಗ್ಸ್ ದಂಧೆ ಪ್ರಕರಣ: ಬಿನೇಶ್ ಕೋಡಿಯೇರಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ
ಬೆಂಗಳೂರು, ಡಿ.29: ಮಾದಕ ದ್ರವ್ಯ ಜಾಲ ಪ್ರಕರಣದಲ್ಲಿ ಸಿಪಿಎಂನ ಮುಖಂಡ ಕೋಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೇಶ್ ಕೋಡಿಯೇರಿ ವಿರುದ್ಧ ಜಾರಿ ನಿರ್ದೇಶನಾಲಯ(ಈಡಿ) ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ 34ನೆ ಸಿಸಿಹೆಚ್ ನ್ಯಾಯಾಲಯಕ್ಕೆ 500 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಬಿನೇಶ್ ಪಾತ್ರದ ಕುರಿತು ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಡ್ರಗ್ಸ್ ಕೇಸ್ ಪ್ರಕರಣ ಸಂಬಂಧ ಬಂಧಿತ ಮೂವರು ಆರೋಪಿಗಳ ಪೈಕಿ ಅನಿಕಾ ಡಿ. ಮೊದಲನೆ ಆರೋಪಿಯಾದರೆ, ಎರಡನೆ ಆರೋಪಿ ರಿಜೇಶ್, ಮೂರನೆ ಆರೋಪಿ ಅನೂಪ್ ಮುಹಮ್ಮದ್‍ನನ್ನು ಬಂಧಿಸಲಾಗಿತ್ತು.
ನಂತರ ಅಕ್ರಮ ಹಣದ ವಹಿವಾಟು ಪ್ರಕರಣದ ಬಗ್ಗೆ ಈಡಿ ಅಧಿಕಾರಿಗಳು ಅನೂಪ್ ವಿಚಾರಣೆ ನಡೆಸಿದಾಗ ಬಿನೇಶ್ 50 ಲಕ್ಷ ರೂ. ಹಣ ಸಾಲವಾಗಿ ಕೊಟ್ಟಿದ್ದು, ಅದೇ ಹಣದಲ್ಲಿ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ಹಾಗೂ ಪಬ್ ತೆರೆಸಿದ್ದ. ಆದರೆ, ಕೊರೋನ ಲಾಕ್‍ಡೌನ್ ಕಾರಣಕ್ಕೆ ರೆಸ್ಟೋರೆಂಟ್ ಹಾಗೂ ಪಬ್‍ನ ಆದಾಯ ಕುಸಿತ ಕಂಡಿತ್ತು. ಈ ಸಂದರ್ಭದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಿರುವ ಬಗ್ಗೆ ಅನೂಪ್ ಮಾಹಿತಿ ಬಿಚ್ಚಿಟ್ಟಿದ್ದ ಎನ್ನಲಾಗಿದೆ.
ಇದೆಲ್ಲದರ ಆಧಾರದ ಮೇರೆಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದು ಈಡಿ ಅಧಿಕಾರಿಗಳು, ಬಿನೇಶ್ ಕೊಡಿಗೇರಿಯ ತೀವ್ರ ವಿಚಾರಣೆ ಮಾಡಲಾಗಿತ್ತು. ಹಣದ ವ್ಯವಹಾರದ ಮಾಹಿತಿ ಕಲೆ ಹಾಕಿ ತದನಂತರ ಪಿಎಂಎಲ್‍ಎ ಮೊಕದ್ದಮೆಯಡಿ ಬಿನೇಶ್ ಕೋಡಿಯೇರಿಯನ್ನು ಬಂಧಿಸಿ ತನಿಖೆ ನಡೆಸಲಾಗಿತ್ತು. ಇದೀಗ ಈಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಬಿನೇಶ್ ಪಾತ್ರದ ಬಗ್ಗೆಯೂ ಮಾಹಿತಿ ಉಲ್ಲೇಖವಾಗಿದೆ ಎಂದು ಹೇಳಲಾಗುತ್ತಿದೆ.