ಬೆಂಗಳೂರು: ರಿಸರ್ವ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರನ್ನು ಹತ್ಯೆಗೈದ ಪುತ್ರ

Update: 2020-12-30 13:14 GMT

ಬೆಂಗಳೂರು, ಡಿ.30: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ನಿವೃತ್ತ ವ್ಯವಸ್ಥಾಪಕರೊಬ್ಬರನ್ನು ಅವರ ಪುತ್ರನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಾರತಿನಗರದ ಆರ್‍ಬಿಐ ವಸತಿ ಗೃಹದಲ್ಲಿ ಮಂಗಳವಾರ ರಾತ್ರಿ 10:30ರ ಸುಮಾರಿಗೆ ನಿವೃತ್ತ ವ್ಯವಸ್ಥಾಪಕ ಅಮರ್‍ನಾಥ್(62) ಅವರನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದು, ಈ ಸಂಬಂಧ ಅವರ ಪುತ್ರ ಮನೋಕ್(27)ನನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಡಾ. ಶರಣಪ್ಪ ತಿಳಿಸಿದ್ದಾರೆ.

ಮುಂಬೈ ಮೂಲದ ಅಮರ್‍ನಾಥ್ ಅವರು ನಿವೃತ್ತರಾದ ನಂತರ ಭಾರತಿನಗರದ ಬಳಿ ಖರೀದಿಸಿದ್ದ ನಿವೇಶನದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದರು. ಅದನ್ನು ನೋಡಿಕೊಳ್ಳಲು ನಗರಕ್ಕೆ ಬಂದಿದ್ದ ಅವರು, ಭಾರತಿ ನಗರದ ಆರ್‍ಬಿಐ ವಸತಿ ಗೃಹದಲ್ಲಿ ನೆಲೆಸಿದ್ದರು.

ಅಮರ್‍ನಾಥ್ ಅವರು ಪತ್ನಿಗೆ ವಿಚ್ಛೇದನ ನೀಡಿದ್ದು ಪುತ್ರ ಮನೋಕ್ ಮಾತ್ರ ಜತೆಗಿದ್ದರು. ಪತ್ನಿ ವಿಚ್ಛೇದನ ನೀಡಿದ ನಂತರ ಬೇರೆ ಮಹಿಳೆಯೊಂದಿಗೆ ಅಮರ್‍ನಾಥ್ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಆಕೆಗೆ ಆಸ್ತಿಯಲ್ಲಿ ಪಾಲು ನೀಡಲು ಮುಂದಾಗಿದ್ದರು. ಇದರಿಂದ ಮನೋಕ್ ಆಕ್ರೋಶಗೊಂಡಿದ್ದ ಎಂದು ಹೇಳಲಾಗುತ್ತಿದೆ.

ಉನ್ನತ ವ್ಯಾಸಂಗ ಮಾಡಿದ್ದ ಮನೋಕ್ ಎಲ್ಲಿಯೂ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು, ಮಾದಕ ವ್ಯಸನಿ ಕೂಡ ಆಗಿದ್ದ. ಅನೈತಿಕ ಸಂಬಂಧದ ವಿಚಾರವಾಗಿ ತಂದೆ-ಮಗನ ನಡುವೆ ರಾತ್ರಿ ಜಗಳವುಂಟಾಗಿದ್ದು ಅದೇ ಆಕ್ರೋಶದಲ್ಲಿ ತಂದೆಯನ್ನು ಇರಿದು ಮನೋಕ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಸುದ್ದಿ ತಿಳಿದ ತಕ್ಷಣ ಭಾರತಿನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮನೋಕ್‍ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಶರಣಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News