‘ವಾರ್ತಾಭಾರತಿ’ಯ 18ನೆ ವಾರ್ಷಿಕ ವಿಶೇಷಾಂಕ ಬಿಡುಗಡೆ
ಬೆಂಗಳೂರು, ಡಿ. 31: ಜನದನಿಯ ಸಾರಥಿ ‘ವಾರ್ತಾಭಾರತಿ’ಯ 18ನೆ ವರ್ಷದ ವಾರ್ಷಿಕ ವಿಶೇಷಾಂಕವನ್ನು ಕರ್ನಾಟಕ ರಾಜ್ಯ ಸರಕಾರದ ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ತಮ್ಮ ಗೃಹ ಕಚೇರಿಯಲ್ಲಿ ಲೋಕಾರ್ಪಣೆ ಮಾಡಿದರು.
ಗುರುವಾರ ಮಧ್ಯಾಹ್ನ ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ವಾರ್ಷಿಕ ವಿಶೇಷಾಂಕದ ಮೊದಲ ಪ್ರತಿಯನ್ನು ವಾರ್ತಾಭಾರತಿ ಪತ್ರಿಕೆಯ ಓದುಗ ಪ್ರತಿನಿಧಿಗಳಾದ ಬೆಂಗಳೂರಿನ ಪತ್ರಿಕೋದ್ಯಮ ವಿದ್ಯಾರ್ಥಿ ದಿಲೀಪ್ ಹಾಗೂ ಮೆಲಿಸಾ ಅವರಿಗೆ ನೀಡುವ ಮೂಲಕ ವಿನೂತನ ರೀತಿಯಲ್ಲಿ ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭ ಬ್ಯಾರೀಸ್ ಗ್ರೂಪ್‍ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆ, ಪತ್ರಿಕೆಯ ಬೆಂಗಳೂರು ಬ್ಯೂರೋ ಮುಖ್ಯಸ್ಥ ಬಸವರಾಜು ಮೇಗಲಕೇರಿ, ಹಿರಿಯ ಪತ್ರಕರ್ತ ಬದ್ರುದ್ದೀನ್ ಮಾಣಿ, ಓದುಗ ಪ್ರತಿನಿಧಿಗಳಾದ ದಿಲೀಪ್ ಮತ್ತು ಮೆಲಿಸಾ ಸೇರಿದಂತೆ ಬೆಂಗಳೂರಿನ ಪತ್ರಿಕಾ ಬಳಗದ ಸದಸ್ಯರು ಉಪಸ್ಥಿತರಿದ್ದರು.