ನ್ಯಾಯಾಲಯದ ಆಕ್ಷೇಪ ನಂತರ ಹತ್ರಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವರ್ಗಾವಣೆ

Update: 2021-01-01 18:17 GMT

ಲಕ್ನೋ, ಜ. 1: ದಲಿತ ಯುವತಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹತ್ರಸ್ ನ ಜಿಲ್ಲಾ ದಂಡಾಧಿಕಾರಿ ಪ್ರವೀಣ್ ಕುಮಾರ್ ಲಕ್ಸ್‌ಕರ್ ಸಹಿತ 16 ಐಎಎಸ್ ಅಧಿಕಾರಿಗಳನ್ನು ಉತ್ತರಪ್ರದೇಶ ಸರಕಾರ ಗುರುವಾರ ವರ್ಗಾವಣೆ ಮಾಡಿದೆ.

 ಪ್ರವೀಣ್ ಕುಮಾರ್ ಲಕ್ಸ್‌ಕರ್ ಅವರನ್ನು ಮಿರ್ಝಾಪುರದ ನೂತನ ಜಿಲ್ಲಾ ದಂಡಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಉತ್ತರಪ್ರದೇಶದ ಜಲ ನಿಗಮದ ಹೆಚ್ಚುವರಿ ಆಡಳಿತ ನಿರ್ದೇಶಕ ರಮೇಶ್ ರಂಜನ್ ಹತ್ರಸ್ ನ ಜಿಲ್ಲಾ ದಂಡಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.

 ಸೆಪ್ಟಂಬರ್ 14ರಂದು ಹತ್ರಸ್ ನಲ್ಲಿ ದಲಿತ ಯುವತಿ ಪ್ರಬಲ ಜಾತಿಯ ನಾಲ್ವರಿಂದ ಅತ್ಯಾಚಾರಕ್ಕೊಳಗಾದ ಘಟನೆಯ ಬಳಿಕ ಲಕ್ಸ್‌ಕರ್ ಅವರು ಸುದ್ದಿಯಾಗಿದ್ದರು. ಯುವತಿ ಸೆಪ್ಟಂಬರ್ 29ರಂದು ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಯುವತಿಯ ಅಂತ್ಯಕ್ರಿಯೆಯನ್ನು ಸೆಪ್ಟಂಬರ್ 30ರಂದು ಮನೆಯ ಸಮೀಪ ಮಧ್ಯರಾತ್ರಿ ನಡೆಸಲಾಗಿತ್ತು. ಪೊಲೀಸರು ತಮ್ಮ ಅನುಮತಿ ಇಲ್ಲದೆ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಯುವತಿಯ ಕುಟುಂಬ ಆರೋಪಿಸಿತ್ತು.

ತನಿಖೆಯ ಪಾರದರ್ಶಕತೆಗಾಗಿ ಉತ್ತರಪ್ರದೇಶ ಸರಕಾರ ಜಿಲ್ಲಾ ದಂಡಾಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಅಲಹಾಬಾದ್ ನ್ಯಾಯಾಲಯದ ಲಕ್ನೋ ನ್ಯಾಯಪೀಠ ನವೆಂಬರ್‌ನಲ್ಲಿ ಕಳವಳ ವ್ಯಕ್ತಪಡಿಸಿತ್ತು.

ಲಕ್ಸ್‌ಕರ್ ಅವರನ್ನಲ್ಲದೆ, ಗೋಂಡಾ ಜಿಲ್ಲೆಯ ದಂಡಾಧಿಕಾರಿ ನಿತಿನ್ ಬನ್ಸಾಲ್ ಅವರನ್ನು ಪ್ರತಾಪ್‌ಗಢಕ್ಕೆ, ನೋಯ್ಡಾದ ಹೆಚ್ಚುವರಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರುತಿ ಅವರನ್ನು ಕೃಷ್ಣ ಕರುಣೇಶ್ ಅವರ ಬದಲಿಗೆ ಬಲರಾಮ್‌ಪುರದ ಜಿಲ್ಲಾ ದಂಡಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಕೃಷ್ಣ ಕರುಣೇಶ್ ಅವರನ್ನು ಗಾಝಿಯಾಬಾದ್ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವರ್ಗಾವಣೆಗೊಂಡ ಇತರ ಪ್ರಮುಖರೆಂದರೆ ಫತೇಪುರದ ಜಿಲ್ಲಾ ದಂಡಾಧಿಕಾರಿ ಸಂಜೀವ್ ಸಿಂಗ್. ಅವರನ್ನು ಚಂಡೌಲಿಗೆ ವರ್ಗಾಯಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News