ಬೆಂಗಳೂರು: ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರಿಂದ 'ಈಡಿ ಕಚೇರಿ ಮಾರ್ಚ್'
ಬೆಂಗಳೂರು, ಜ.4: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯದರ್ಶಿ ರವೂಫ್ ಶರೀಫ್‍ರ ಬಂಧನ ಖಂಡಿಸಿ ಜಾರಿ ನಿರ್ದೇಶನಾಲಯ(ಈಡಿ)ದ ವಿರುದ್ಧ ಸೋಮವಾರ ನಗರದ ಶಾಂತಿನಗರದಲ್ಲಿರುವ ಈಡಿ ಕಚೇರಿಗೆ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಅಥಾವುಲ್ಲಾ, ‘ಈಡಿ ಸಂಸ್ಥೆಯು ನಮ್ಮನ್ನು ಗುರಿಪಡಿಸುತ್ತಿರುವ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ನಾಯಕರು ಎಲ್ಲಿಯೂ ಊರು ಬಿಟ್ಟು ಹೋಗಲಿಲ್ಲ. ಯಾಕಂದರೆ ನಮ್ಮ ವ್ಯವಹಾರಗಳು ಸಂವಿಧಾನ ಬದ್ಧವಾಗಿದೆ ಎಂಬ ಸ್ಪಷ್ಟತೆಯಿದೆ. ಬಿಜೆಪಿಯ ಕೈಗೊಂಬೆಯಾಗಿ ವರ್ತಿಸುತ್ತಿರುವ ಈಡಿಯಿಂದ ನಮ್ಮ ಧ್ವನಿಯನ್ನು ಹತ್ತಿಕ್ಕಲಾಗದು ಎಂದರು.
ರಾಜ್ಯ ಸಮಿತಿ ಸದಸ್ಯೆ ಶೈಮಾ ಶರೀಫ್ ಮಾತನಾಡಿ, ಸೈನ್ಯವು ನಿಮ್ಮದು, ಆಡಳಿತವು ನಿಮ್ಮದು, ಮಾಧ್ಯಮಗಳು ನಿಮ್ಮದೇ, ನಿಮ್ಮೆಲ್ಲ ಅನ್ಯಾಯದ ವಿರುದ್ಧ ಗಟ್ಟಿ ಧ್ವನಿಯಾಗಿ ಫ್ಯಾಶಿಸಂ ಸಂಕೋಲೆಯನ್ನು ಕಿತ್ತೊಗೆಯಲಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ಕೋಶಾಧಿಕಾರಿ ಸೈಯದ್ ಇಮ್ರಾನ್, ಸಮಿತಿ ಸದಸ್ಯ ಅಲ್ತಾಫ್ ಹೊಸಪೇಟೆ, ಬೆಂಗಳೂರು ಜಿಲ್ಲಾಧ್ಯಕ್ಷ ಝುಬೆರ್ ಉಪಸ್ಥಿತರಿದ್ದರು.