ಕ್ಯಾನ್ಸರ್ ಪೀಡಿತ ಸ್ನೇಹಿತನ ಚಿಕಿತ್ಸೆಗಾಗಿ ಸರಗಳ್ಳತನ: ಆರೋಪಿಗಳಿಬ್ಬರ ಬಂಧನ
ಬೆಂಗಳೂರು, ಜ.4: ಆಸ್ಪತ್ರೆಗೆ ದಾಖಲಾದ ಸ್ನೇಹಿತನ ಚಿಕಿತ್ಸೆಗಾಗಿ ಸರಗಳ್ಳತನ ಕೃತ್ಯಕ್ಕೆ ಕೈಹಾಕಿದ್ದ ಆರೋಪಿಗಳಿಬ್ಬರನ್ನು ಇಲ್ಲಿನ ವಿವಿಪುರಂ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮಳವಳ್ಳಿಯ ಮಂಜುನಾಥ್, ಮೈಸೂರಿನ ನರಸೀಪುರದ ಮರಿಸ್ವಾಮಿ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಡಿ.30ರಂದು ವಿವಿಪುರಂನ ಸಜ್ಜನ್‍ರಾವ್ ರಸ್ತೆಯಲ್ಲಿರುವ ಗಿರವಿ ಮಳಿಗೆಯೊಂದರ ಬಳಿ ಬಂಧಿತ ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಗಸ್ತಿನಲ್ಲಿದ್ದ ವಿವಿಪುರ ಪೊಲೀಸ್ ಠಾಣೆಯ ಪೊಲೀಸರು ಅವರನ್ನು ಗಮನಿಸಿ ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದರು. ಅನುಮಾನದ ಮೇರೆಗೆ ಕೂಲಂಕಷವಾಗಿ ವಿಚಾರಿಸಿದಾಗ ಮಂಜುನಾಥ್ ತನ್ನ ಜೇಬಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಪೊಲೀಸರಿಗೆ ತೋರಿಸಿ ಇದನ್ನು ಮಾರಾಟ ಮಾಡಲು ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ್ದ.
ತದನಂತರ, ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಗಳ ಸ್ನೇಹಿತ ಕ್ಯಾನ್ಸರ್ ಗೆ ತುತ್ತಾಗಿದ್ದು, ಚಿಕಿತ್ಸಾ ವೆಚ್ಚ ಭರಿಸಲು ಹಣವಿರಲಿಲ್ಲ. ಹಣ ಹೊಂದಿಸುವ ಸಲುವಾಗಿ ಚಾಮರಾಜನಗರದ ಗಣಗನೂರು ಗ್ರಾಮದ ಅಂಗಡಿ ಬಳಿ ನಿಂತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಸಿದುಕೊಂಡು ಬೈಕ್‍ನಲ್ಲಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಸದ್ಯ ಬಂಧಿತ ಆರೋಪಿಗಳಿಂದ 40 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.