ಹೆಚ್ಚುವರಿ ತೆರಿಗೆ ಖಂಡಿಸಿ ಬಿಬಿಎಂಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದ ಕಾಂಗ್ರೆಸ್

Update: 2021-01-04 14:30 GMT

ಬೆಂಗಳೂರು, ಜ.4: ಬಿಬಿಎಂಪಿಯು ಸಾರ್ವಜನಿಕರ ಮೇಲೆ ಅನಗತ್ಯ ತೆರಿಗೆ ಹೊರೆ ವಿಧಿಸುತ್ತಿದೆ ಎಂದು ಆರೋಪಿಸಿ ಹಾಗೂ ರಾಜ್ಯ ಸರಕಾರದ ಆಡಳಿತ ವೈಖರಿ ಖಂಡಿಸಿ ಬಿಬಿಎಂಪಿ ಕೇಂದ್ರ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಬಿಬಿಎಂಪಿ ಕೇಂದ್ರ ಕಚೇರಿ ವರೆಗೂ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತದನಂತರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ತುಘಲಕ್ ಸರಕಾರ ನಡೆಯುತ್ತಿದೆ. ಕೊರೋನ ಸಮಯದಲ್ಲಿ ಸರಕಾರವೇ ಲಾಕ್‍ಡೌನ್, ಸೀಲ್‍ಡೌನ್ ಮಾಡಿ ಈಗ ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೊರೋನದಿಂದಾಗಿ ಜನ ತತ್ತರಿಸಿದ್ದಾರೆ. ವ್ಯಾಪಾರ ವಹಿವಾಟು ಇಲ್ಲ. ಆದರೂ ಪಾಲಿಕೆ ಹೆಚ್ಚಿನ ತೆರಿಗೆ ಹಾಕಿದೆ. ನಾವು ತೆರಿಗೆ ಮನ್ನಾ ಮಾಡಿ ಎಂದು ಆಗ್ರಹಿಸಿದರೆ, ಇವರು ಹೆಚ್ಚು ಮಾಡುತ್ತಿದ್ದಾರೆ ಎಂದ ಅವರು, ಕೊರೋನ ಸಮಯದಲ್ಲಿ ಸೋಂಕಿತರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಈ ಅವಧಿಯಲ್ಲಿ ಒಂದು ಕೆಲಸವೂ ಆಗಿಲ್ಲ. ಅನೇಕ ಗುತ್ತಿಗೆದಾರರು ಬಿಲ್ ಬಾಕಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆ ಕಟ್ಟುವ ಯೋಜನೆ ಶುಲ್ಕವನ್ನು 3 ಪಟ್ಟು ಹೆಚ್ಚಿಸಲಾಗಿದ್ದು ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದರು.

ರಸ್ತೆಗಳಲ್ಲಿ ಕಸ ತುಂಬಿ ತುಳುಕುತ್ತಿದೆ, ಇದು ಪಕ್ಷದ ವಿಚಾರ ಅಲ್ಲ. ನಾಗರಿಕರ ಬದುಕಿನ ವಿಚಾರ. ಸರಕಾರ ಕಸ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ. ಕೇವಲ ಜಾಹೀರಾತು ಮೂಲಕ ಪ್ರಚಾರ ಪಡೆಯುತ್ತಿದ್ದೀರಿ. ಇನ್ನು, ನಾಗರಿಕರ ಸಮಸ್ಯೆ ಕೇಳುವ ಮನಸ್ಥಿತಿ ಇಲ್ಲ. ಹೀಗಾಗಿ ನಾವು ಇಂದು ನಮ್ಮ ಬೇಡಿಕೆಗಳನ್ನು ನಿಮ್ಮ ಮುಂದಿಟ್ಟು ಹೋರಾಟ ಮಾಡಲು ಬಂದಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಜನಸಾಮಾನ್ಯರು ಮನೆ ಕಟ್ಟಿಕೊಳ್ಳಲು ನಕ್ಷೆ ಮಂಜೂರು ಮಾಡಿಸಿ ಕೊಳ್ಳಬೇಕಾದರೆ 2 ಲಕ್ಷ ರೂ. ನೀಡಬೇಕಾದ ಅನಿವಾರ್ಯತೆ ಇದೆ. ಬಿಬಿಎಂಪಿ ಎಲ್ಲ ತೆರಿಗೆಗಳನ್ನು ಹೆಚ್ಚು ಮಾಡಿ ಜನ ಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ ಎಂದು ದೂರಿದರು.

ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಬಿಬಿಎಂಪಿಯ 11 ಆಸ್ತಿಗಳನ್ನು ಅಡಮಾನ ಮಾಡಲಾಗಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಾಲ ತೀರಿಸಿ ಆಸ್ತಿಗಳನ್ನು ಬಿಡಿಸಿಕೊಂಡಿದ್ದೇವೆ ಎಂದ ಅವರು, ಬಿಜೆಪಿ ಅಧಿಕಾರಾವಧಿಯಲ್ಲಿ ಕಸ ನಿರ್ವಹಣೆ ಸರಿಯಾಗಿ ನಡೆದಿಲ್ಲ. ಮೆಟ್ರೊ ನಗರ, ಉದ್ಯಾನನಗರಿ ಎಂದು ಹೆಸರು ಪಡೆದಿರುವ ಬೆಂಗಳೂರಿಗೆ ಗಾರ್ಬೆಜ್ ನಗರ ಎಂದು ಕೆಟ್ಟ ಹೆಸರು ತಂದುಕೊಟ್ಟರು. ಗುತ್ತಿಗೆದಾರರಿಗೆ 3 ಸಾವಿರ ಕೋಟಿ ರೂ.ಗಳ ಬಾಕಿ ಕೊಡಬೇಕಿದೆ. ಹಣ ಕೊಡದೇ ಇದ್ದರೆ ಯಾರು ತಾನೆ ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕರಾದ ರಾಮಲಿಂಗಾರೆಡ್ಡಿ, ರಿಝ್ವಾನ್ ಅರ್ಶದ್, ಸೌಮ್ಯಾ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್, ಡಿಸಿಸಿ ಅಧ್ಯಕ್ಷ ಕೃಷ್ಣಪ್ಪ, ರಾಜಕುಮಾರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಕೆಳಗೆ ಬಿದ್ದ ಶಾಸಕಿ

ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಬಿಬಿಎಂಪಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ಹೊರಟ ಕಾಂಗ್ರೆಸ್ ಪಡೆ, ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿತು. ಈ ಸಂದರ್ಭದಲ್ಲಿ ಬಿಬಿಎಂಪಿ ಕಚೇರಿಯ ಮುಖ್ಯ ದ್ವಾರ ಬಂದ್ ಮಾಡಲಾಗಿತ್ತು. ತದನಂತರ ಗೇಟ್ ತೆಗೆಯುತ್ತಿದ್ದಂತೆ ಕಾರ್ಯಕರ್ತರು ನಾ ಮುಂದು- ತಾ ಮುಂದು ಎಂಬಂತೆ ಒಳ ನುಗ್ಗಿದರು. ಈ ವೇಳೆ ಬಾಗಿಲು ಮುಂಭಾಗದಲ್ಲೇ ನಿಂತಿದ್ದ ಸೌಮ್ಯರೆಡ್ಡಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಬಳಿಕ ಪಕ್ಕದಲ್ಲೇ ಇದ್ದ ಇತರರು ಶಾಸಕಿಯನ್ನ ಮೇಲಕ್ಕೆತ್ತಿದರು.

ವಾಹನ ದಟ್ಟಣೆ

ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ ಹಡ್ಸನ್ ವೃತ್ತ, ಕಾರ್ಪೋರೇಷನ್ ಸರ್ಕಲ್‍ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿ, ವಾಹನ ಸವಾರರು ಪರದಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News