ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಬ್ರಾಹ್ಮಣ ಸಮುದಾಯದ ಪಾತ್ರ ಮಹತ್ವದ್ದು: ಗೋವಿಂದ ಕಾರಜೋಳ

Update: 2021-01-06 17:36 GMT

ಬೆಂಗಳೂರು, ಜ. 6: ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಬ್ರಾಹ್ಮಣ ಸಮುದಾಯದ ಪಾತ್ರ ಮಹತ್ತರವಾದುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಏರ್ಪಡಿಸಿದ್ದ ಪ್ರತಿಭೋತ್ಸವ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಅಕ್ಷರ ಜ್ಞಾನ,  ಸಂಸ್ಕೃತಿಯ ಸಂರಕ್ಷಣೆಯಲ್ಲಿ ಬ್ರಾಹ್ಮಣ ಸಮುದಾಯದ ಪಾತ್ರ ಮಹತ್ವದ್ದು. ರಾಜ್ಯ, ರಾಷ್ಟ್ರದ ಅಭಿವೃದ್ಧಿಯಲ್ಲಿ ಬ್ರಾಹ್ಮಣ ಸಮುದಾಯದ ಪಾತ್ರ ಅಪಾರವಾಗಿದೆ ಎಂದರು.

ನಾಡಿನ ಹೆಸರಾಂತ ಜ್ಞಾನಿಗಳಾದ ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು ಜನಿಸಿ, ಅಕ್ಷರ ಜ್ಞಾನ, ಸಂಸ್ಕೃತಿ ಪರಂಪರೆ, ಸಾಹಿತ್ಯ ಕ್ಷೇತ್ರ ಅದರಲ್ಲೂ ಕನ್ನಡ ಸಾಹಿತ್ಯವನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಬ್ರಾಹ್ಮಣ ಸಮುದಾಯದಿಂದ ಅಕ್ಷರ ಮತ್ತು ಸಂಸ್ಕೃತಿ ಬೆಳೆದು ಬಂದಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲೂ ಈ ಸಮುದಾಯವು ಮುಂಚೂಣಿಯಲ್ಲಿತ್ತು. ಕೈಗಾರಿಕಾ ಕ್ಷೇತ್ರಗಳಲ್ಲೂ ಅದ್ವಿತೀಯ ಕೆಲಸ ಮಾಡಿ, ಉದ್ಯೋಗದಾತರಾಗಿದ್ದಾರೆ. ಅವರ ಸೇವೆ ಅವಿಸ್ಮರಣೀಯ ಎಂದ ಅವರು, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿಯನ್ನು ಕೇಂದ್ರ ಸರಕಾರವು ಕಲ್ಪಿಸಿದ್ದು, ರಾಜ್ಯ ಸರಕಾರ ಅದನ್ನು ಜಾರಿಗೊಳಿಸಿದೆ ಎಂದರು.

1994ರಲ್ಲಿ ಭೀಮಾನದಿ ಉಕ್ಕಿ ಹರಿದಾಗ ವಿಜಯಪುರ ಜಿಲ್ಲೆಯ ಗೋವಿಂದಪುರ ಗ್ರಾಮ ಮುಳುಗಿ ಹೋಗಿತ್ತು. ಆಗ ಪೇಜಾವರ ಶ್ರೀಗಳು ಆ ಗ್ರಾಮಕ್ಕೆ ಭೇಟಿ ನೀಡಿ, ಆ ಗ್ರಾಮವನ್ನು ದತ್ತು ತೆಗೆದುಕೊಂಡು ಪುನರ್ ನಿರ್ಮಾಣ ಮಾಡಿ, ಮಾದರಿ ಗ್ರಾಮವನ್ನಾಗಿಸಿ ಪ್ರತಿ ಮನೆಗೂ ತಲಾ ಒಂದು ಹಸುವನ್ನು ನೀಡಿದರು. ಶ್ರೀಗಳು ಕೈಗೊಂಡ ಈ ಗ್ರಾಮದ ಪುನರ್ ನಿರ್ಮಾಣದ ಮಾದರಿಯಂತೆ ಮುಖ್ಯಮಂತ್ರಿ ಯಡಿಯೂರಪ್ಪ 2009ರಲ್ಲಿ ಯುಕೆಪಿಯಿಂದ ಬಾದಿತವಾದ ಗ್ರಾಮಗಳನ್ನು ಪುನರ್ ನಿರ್ಮಾಣ ಮಾಡಿದ್ದಾರೆಂದು ಹೇಳಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಸುರೇಶ್ ಕುಮಾರ್, ಆರ್.ಅಶೋಕ್, ಕೆ.ಗೋಪಾಲಯ್ಯ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧ. ಈ ಸಮುದಾಯದವರು ಶೈಕ್ಷಣಿಕವಾಗಿ ಬುದ್ಧಿವಂತರಾಗಿದ್ದರೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈ ಸಮುದಾಯವನ್ನು ಮೇಲೆತ್ತಲು ನಮ್ಮ ಸರಕಾರ ಶ್ರಮಿಸಲಿದೆ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News