×
Ad

ವೃದ್ಧಾಪ್ಯ ವೇತನ ನೆಪದಲ್ಲಿ ಚಿನ್ನಾಭರಣಗಳನ್ನು ದೋಚುತ್ತಿದ್ದ ಆರೋಪ: ಓರ್ವನ ಬಂಧನ

Update: 2021-01-07 17:43 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.7: ವೃದ್ಧೆಯರ ಗಮನವನ್ನು ಬೇರೆಡೆ ಸೆಳೆದು ವಂಚಿಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಆರೋಪದ ಮೇಲೆ ಓರ್ವನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಹುರುಳಿಚಿಕ್ಕನಹಳ್ಳಿಯ ಮಂಜೇಶ್(37) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 8.55 ಲಕ್ಷ ರೂ ಮೌಲ್ಯದ 171 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಸೋಲದೇವನಹಳ್ಳಿಯ ಬಿಎಸ್‍ಎನ್‍ಎಲ್ ಕಚೇರಿ ಬಳಿಯ ಗೀತಾ ಅವರು ಕಳೆದ ನ.15 ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಸ್ವಗ್ರಾಮ ದೊಡ್ಡಬಳ್ಳಾಪುರದ ಕಿಲ್ಲಾರಹಳ್ಳಿಗೆ ಹೋಗಿದ್ದು, ಡಿ.14ರಂದು ಮರಳಿ ಮನೆಗೆ ಬಂದು ನೋಡಿದಾಗ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡಿರುವುದು ಪತ್ತೆಯಾಗಿದೆ.

ಈ ಸಂಬಂಧ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಸೋಲದೇವನಹಳ್ಳಿ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಈ ಮೊದಲು ಅಕ್ಟೋಬರ್ ನಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರಬಂದ ಬಳಿಕವೂ ಆತ ಒಂಟಿಯಾಗಿರುವ ವೃದ್ಧ ಅನಕ್ಷರಸ್ಥ ಮಹಿಳೆಯರನ್ನು ಗುರುತಿಸಿ, ಅವರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ ಮಾಡಿಸಿಕೊಡುತ್ತೇನೆಂದು ಹೇಳಿ ಫೋಟೋಗಳನ್ನು ತೆಗೆಯುತ್ತಿದ್ದ. ಈ ಸಂದರ್ಭ ಅವರ ಮೈ ಮೇಲಿರುವ ಚಿನ್ನಾಭರಣಗಳನ್ನು ಬಿಚ್ಚಿಸಿಕೊಂಡು ಗಮನ ಬೇರೆಡೆ ಸೆಳೆದು ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದುದಾಗಿ ತನಿಖೆಯಿಂದ ತಿಳಿದು ಬಂದಿದೆ.

ಕಳೆದ ಡಿ.29 ರಂದು ಗಸ್ತಿನಲ್ಲಿ ಸೋಲದೇವನಹಳ್ಳಿ ಪೊಲೀಸರಿಗೆ ಹೆಸರುಘಟ್ಟ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಮಾಡಿರುವ ಚಿನ್ನಾಭರಣಗಳನ್ನು ಗಿರವಿ ಇಡಲು ಬಂದಿರುವುದಾಗಿ ತಿಳಿದು ಬಂದಿದ್ದು ಆತನನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News