ದರೋಡೆ ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧನ
ಬೆಂಗಳೂರು, ಜ.7: ದರೋಡೆ, ಜೀವ ಬೆದರಿಕೆ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿ ಕಾರ್ತಿಕ್‍ಗೆ ಪೊಲೀಸರು ಗುಂಡು ಹೊಡೆದು ನಂದಿನಿ ಲೇಔಟ್‍ನಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಶ್ರೀರಾಮಪುರದ ರೌಡಿ ಕಾರ್ತಿಕ್(21) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಕಾರ್ತಿಕ್‍ನನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಪೊಲೀಸರು ಬಂಧಿಸಲು ಬೆನ್ನಟ್ಟಿ ಹೋದಾಗ ಕಾರ್ತಿಕ್, ಏಕಾಏಕಿ ಪೇದೆ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಪೊಲೀಸರು ಕಾರ್ತಿಕ್‍ನನ್ನು ಗುಂಡು ಹೊಡೆದು ಬಂಧಿಸಿದ್ದಾರೆ.
ನಂದಿನಿ ಲೇಔಟ್ ಬಳಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ರೌಡಿ ಕಾರ್ತಿಕನ ಪತ್ತೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿ, ಓಕಳಿಪುರದ ಬಳಿ ಬುಧವಾರ ತಡರಾತ್ರಿ ಕಾಣಿಸಿಕೊಂಡಿದ್ದ. ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಪೊಲೀಸರ ತಂಡ, ಸ್ಥಳಕ್ಕೆ ಹೋಗಿ ಆರೋಪಿಯನ್ನು ಹಿಡಿಯಲು ಮುಂದಾಗಿತ್ತು.
ಆಗ ಪೊಲೀಸರ ಮೇಲೆ ದಾಳಿ ನಡೆಸಿ ಓಡಲು ಯತ್ನಿಸಿದ್ದ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದು ಅದು ಆರೋಪಿ ಕಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೊಕದ್ದಮೆ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಠಾಣಾ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.