×
Ad

ಭಾರತದ ಜಾತಿ ವ್ಯವಸ್ಥೆಯಲ್ಲಿ ದುಡಿಯದೆ ಸಂಪತ್ತು ಗಳಿಸಬಹುದು: ನ್ಯಾ.ನಾಗಮೋಹನದಾಸ್

Update: 2021-01-07 19:24 IST

ಬೆಂಗಳೂರು, ಜ.7: ಭಾರತದ ಜಾತಿ ವ್ಯವಸ್ಥೆಯು ಮೇಲ್ಜಾತಿಗಳು ಬೆವರನ್ನು ಸರಿಸದೆ ಎಲ್ಲ ಸಂಪತ್ತನ್ನು ಪಡೆಯುವ ಹಾಗೂ ಕೆಳಜಾತಿಗಳು ರಾತ್ರಿ-ಹಗಲು ದುಡಿದರೂ ಊಟವನ್ನು ಹೊಂದಿಸಿಕೊಳ್ಳಲಾಗದ ರೀತಿಯಲ್ಲಿ ರೂಪಿತಗೊಂಡಿದೆ ಎಂದು ವಿಶ್ರಾಂತ ನ್ಯಾ.ನಾಗಮೋಹನ ದಾಸ್ ತಿಳಿಸಿದ್ದಾರೆ.

ಗುರುವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ನಗರದ ಬಸಪ್ಪ ಕೊಂಡಜ್ಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಾತಿ ದಮನ ವಿರೋಧಿಸಿ ಹಾಗೂ ದಲಿತರ ಹಕ್ಕುಗಳಿಗಾಗಿ ಒತ್ತಾಯಿಸಿ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದ ಜಾತಿ ವ್ಯವಸ್ಥೆಯಲ್ಲಿ ಕೆಲವು ಮೇಲ್ಜಾತಿಗಳಿಗೆ ಶ್ರಮ ಪಡದೆ ಬೇರೆಯವರ ಶ್ರಮವನ್ನು ಶೋಷಿಸಿ ಸಂಪತ್ತನ್ನು ಕಸಿಯಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಜಾತಿ ಸಮುದಾಯದ ಮಂದಿ ತಮ್ಮ ಸ್ವಾರ್ಥಕ್ಕಾಗಿ ಶೋಷಣೆಗೆ ಪೂರಕವಾಗಿ ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆಂದು ಅವರು ಆಪಾದಿಸಿದ್ದಾರೆ.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಜಾತಿಗಳಿವೆ. ಇವುಗಳ ಮಧ್ಯೆ ಸಂಬಂಧ ಕಲ್ಪಿಸುವುದಕ್ಕೆ ಅಡಚಣೆಯಾಗಿ ಸಂಪ್ರದಾಯಗಳ ಸೂತ್ರವನ್ನು ಹೆಣೆಯಲಾಗಿದೆ. ಇಂದಿನ ಆಧುನಿಕ ಯುಗದಲ್ಲೂ ಪ್ರತಿಯೊಂದು ಜಾತಿಯು ತಮ್ಮ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವಂತಹ ಸಾಮಾಜಿಕ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದ ಜಾತಿ ವ್ಯವಸ್ಥೆಯನ್ನು ಖಂಡಿಸಿ ಇತಿಹಾಸದುದ್ದಕ್ಕೂ ಬುದ್ಧ, ಬಸವಣ್ಣ, ಪೆರಿಯಾರ್, ಜ್ಯೋತಿಬಾ ಫುಲೆ ಸೇರಿದಂತೆ ಅಂಬೇಡ್ಕರ್ ಆದಿಯಾಗಿ ಹಲವರು ಶ್ರಮಿಸಿದ್ದಾರೆ. ಹಾಗೂ ಬ್ರಿಟಿಷರ ಆಳ್ವಿಕೆಯಲ್ಲಿ ಮದ್ರಾಸ್ ಪ್ರಾಂತ್ಯ, ಮೈಸೂರು, ಕೊಲ್ಲಾಪುರ ಸೇರಿದಂತೆ ಹಲವಾರು ಕಡೆ ದಲಿತರಿಗೆ ವಿಶೇಷ ಆರ್ಥಿಕ ಸೌಲಭ್ಯಗಳನ್ನು ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ಸ್ವಾತಂತ್ರ್ಯ ನಂತರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಹಿತಿಮಿತಿಗಳ ನಡುವೆ ಶೋಷಿತರಿಗೆ, ಹಿಂದುಳಿದವರಿಗೆ ಹಾಗೂ ಮಹಿಳೆಯರಿಗೆ ತಮ್ಮ ಮೀಸಲಾತಿಯ ಮೂಲಕ ಸೌಲಭ್ಯಗಳನ್ನು ಜಾರಿ ಮಾಡಲು ಸರಕಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ಇತ್ತೀಚಿನ ದಿನಗಳನ್ನು ಅಂತಹ ಸೌಲಭ್ಯಗಳಿಗೆ ಕಂಟಕವಾಗಿ ನೀತಿ, ನಿಯಮಗಳು ಜಾರಿಯಾಗುತ್ತಿವೆ. ಇದರ ವಿರುದ್ದ ಒಗ್ಗಟ್ಟಿನ ಹೋರಾಟ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಈ ಸಮಾವೇಶದಲ್ಲಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್, ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಮ್ಮ, ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News