ಎರಡು ‘ಮೇಡ್ ಇನ್ ಇಂಡಿಯಾ’ ಕೋವಿಡ್ ಲಸಿಕೆಗಳೊಂದಿಗೆ ಮನುಕುಲದ ರಕ್ಷಣೆಗೆ ಭಾರತ ಸಜ್ಜು: ಪ್ರಧಾನಿ ನರೇಂದ್ರ ಮೋದಿ

Update: 2021-01-09 17:23 GMT

ಹೊಸದಿಲ್ಲಿ,ಜ.9: ಭಾರತವು ಎರಡು ‘ಮೇಡ್ ಇನ್ ಇಂಡಿಯಾ’ ಕೊರೋನವೈರಸ್ ಲಸಿಕೆಗಳೊಂದಿಗೆ ಮನುಕುಲದ ರಕ್ಷಣೆಗೆ ಸಜ್ಜಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ತಿಳಿಸಿದರು.

16ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಮೋದಿ,‘ಕೊರೋನವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಕನಿಷ್ಠ ಮರಣ ದರ ಮತ್ತು ಗರಿಷ್ಠ ಚೇತರಿಕೆ ದರ ಹೊಂದಿರುವ ವಿಶ್ವದ ಕೆಲವೇ ದೇಶಗಳಲ್ಲಿ ಒಂದಾಗಿದೆ. ಇಂದು ನಾವು ಒಂದಲ್ಲ,ಎರಡು ಲಸಿಕೆಗಳೊಂದಿಗೆ ಮನುಕುಲ ರಕ್ಷಿಸಲು ಸಿದ್ಧರಾಗಿದ್ದೇವೆ ’ ಎಂದರು.

ವಿಶ್ವವು ಭಾರತದ ಲಸಿಕೆಗಳಿಗಾಗಿ ಕಾಯುತ್ತಿರುವುದು ಮಾತ್ರವಲ್ಲ, ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ದೇಶವು ಹೇಗೆ ನಡೆಸುತ್ತದೆ ಎನ್ನುವುದರ ಮೇಲೂ ನಿಗಾಯಿಟ್ಟಿದೆ ಎಂದರು.

ಕೊರೋನವೈರಸ್ ಸಾಂಕ್ರಾಮಿಕಕ್ಕೆ ಮುನ್ನ ಭಾರತವು ವೈದ್ಯಕೀಯ ಉಪಕರಣಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು, ಆದರೆ ಅದೀಗ ಈ ವಿಷಯದಲ್ಲಿ ಸ್ವಾವಲಂಬಿಯಾಗಿದೆ. ಅದು ಅಗತ್ಯವುಳ್ಳ ದೇಶಗಳಿಗೆ ಔಷಧಿಗಳ ಪೂರೈಕೆಯನ್ನು ಮುಂದುವರಿಸಿದೆ ಎಂದು ಮೋದಿ ನುಡಿದರು.

ಕೊರೋನವೈರಸ್ ಸಾಂಕ್ರಾಮಿಕದ ನಡುವೆಯೂ ಭಾರತವು ಅಸೀಮ ಮನೋಬಲವನ್ನು ಪ್ರದರ್ಶಿಸಿದೆ. ಇಂತಹ ಬೃಹತ್ ದೇಶವು ಸವಾಲಿನ ವಿರುದ್ಧ ಒಗ್ಗಟ್ಟಿನಿಂದ ಎದ್ದು ನಿಂತಿತ್ತು. ಇಂತಹ ಉದಾಹರಣೆ ವಿಶ್ವದಲ್ಲಿ ಇನ್ನೊಂದಿಲ್ಲ ಎಂದರು.

ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ಕೊಡುಗೆಗಾಗಿ ಅನಿವಾಸಿ ಭಾರತೀಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಮೋದಿ, ನೀವೆಲ್ಲೇ ಇದ್ದರೂ ಬೃಹತ್ ಕೊಡುಗೆಯನ್ನು ನೀಡಿದ್ದೀರಿ. ಪಿಎಂ-ಕೇರ್ಸ್ ನಿಧಿಗೆ ನಿಮ್ಮ ದೇಣಿಗೆಗಳು ಭಾರತದ ಆರೋಗ್ಯ ಸೇವೆಗಳನ್ನು ಬಲಗೊಳಿಸಲು ನೆರವಾಗುತ್ತಿವೆ ಎಂದು ಹೇಳಿದರು.

ಭಾರತವು ಕೊರೋನವೈರಸ್ ಲಸಿಕೆ ನೀಡಿಕೆಯನ್ನು ಶೀಘ್ರವೇ ಆರಂಭಿಸುವ ನಿರೀಕ್ಷೆಯಿದೆ. ಮುಂದಿನ ಕೆಲವು ದಿನಗಳಲ್ಲಿ ಎಲ್ಲ ಭಾರತೀಯರಿಗೆ ಲಸಿಕೆಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಶುಕ್ರವಾರ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News