ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ: ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವ ಸಿಸಿಬಿ ಬಲೆಗೆ

Update: 2021-01-12 11:43 GMT

ಬೆಂಗಳೂರು, ಜ.12: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಆರೋಪಿ ಆದಿತ್ಯ ಆಳ್ವ ಪರಾರಿಯಾಗಿದ್ದ. ಕಳೆದ ಮೂರು ತಿಂಗಳಿನಿಂದಲೂ ಶೋಧ ಕಾರ್ಯ ಮುಂದುವರಿಸಿದ್ದ ಸಿಸಿಬಿ ಪೊಲೀಸರು ಸೋಮವಾರ ತಡರಾತ್ರಿ ಸೆರೆ ಹಿಡಿದಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸೋಮವಾರ ರಾತ್ರಿ ಆದಿತ್ಯನನ್ನು ಚೆನ್ನೈನಲ್ಲಿ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಳಿಕ, ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು ಎಂದರು.

ಹೋಂ ಸ್ಟೇಂನಲ್ಲಿ ವಾಸ: ಆರೋಪಿ ಆದಿತ್ಯ ಆಳ್ವ ಕಳೆದ ಹಲವು ದಿನಗಳಿಂದ ಚೆನ್ನೈನ ಹೊರವಲಯದ ಹೋಮ್ ಸ್ಟೇಯಲ್ಲಿ ತಲೆಮರೆಸಿಕೊಂಡಿದ್ದ. ಆದಿತ್ಯನ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡವು ಕಳೆದ ನಾಲ್ಕು ತಿಂಗಳಿನಿಂದ ಹುಡುಕಾಟ ನಡೆಸಿತ್ತಾದರೂ ಆತನ ಸುಳಿವು ಪತ್ತೆಯಾಗಿರಲಿಲ್ಲ.

ಆದಿತ್ಯನ ಭಾವ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಸಹೋದರಿ ಹಾಗೂ ಕುಟುಂಬದವರನ್ನು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದರಾದರೂ ಆದಿತ್ಯನ ಪತ್ತೆ ಸವಾಲಾಗಿ ಪರಿಣಮಿಸಿತ್ತು. ಚೆನ್ನೈ ಬಳಿ ತಲೆಮರೆಸಿಕೊಂಡಿರುವ ಸುಳಿವು ಕೆಲದಿನಗಳ ಹಿಂದೆ ಸಿಸಿಬಿಯ ವಿಶೇಷ ತಂಡಕ್ಕೆ ದೊರೆತಿದ್ದು ಆದನ್ನು ಅಧರಿಸಿ ಸತತ ಕಾರ್ಯಾಚರಣೆ ನಡೆಸಿ ಇನ್‍ಸ್ಪೆಕ್ಟರ್ ಪುನೀತ್ ಹಾಗೂ ಸಿಬ್ಬಂದಿ ತಿಮ್ಮೆಗೌಡ ಆದಿತ್ಯನನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದರು.

ಡ್ರಗ್ಸ್ ಜಾಲ ಪ್ರಕರಣದಲ್ಲಿ ಆದಿತ್ಯ ಆಳ್ವ 6ನೆ ಆರೋಪಿಯಾಗಿದ್ದು ಕಾಟನ್ ಪೇಟೆ ಠಾಣೆಯಲ್ಲಿ ಎಫ್‍ಐಆರ್ ದಾಖಲಾದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದನು. ಅಲ್ಲಿಂದ ಆದಿತ್ಯ ಆಳ್ವಗೆ ಸಿಸಿಬಿ ಪೊಲೀಸರು ಶೋಧ ನಡೆಸಿದ್ದು ಕಳೆದ ಸೆ.21 ರಂದು ಲುಕ್‍ಔಟ್ ನೋಟಿಸ್ ಜಾರಿ ಮಾಡಿದ್ದರು.

ಮಾಜಿ ಸಚಿವರ ಪುತ್ರ

ಆದಿತ್ಯ ಆಳ್ವ, ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರನಾಗಿದ್ದು, ರೆಸಾರ್ಟ್ ಮತ್ತು ಹೋಟೆಲ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಸಹಿತ ಹಲವರನ್ನು ಬೆಂಗಳೂರು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈ ಸಂದರ್ಭದಲ್ಲಿ ಆದಿತ್ಯ ಹೆಸರು ಕೇಳಿಬಂದಿದ್ದು, ಪೊಲೀಸರು ಕಾರ್ಯಪ್ರವೃತ್ತರಾಗುತ್ತಲೇ ಅವರು ತಪ್ಪಿಸಿಕೊಂಡಿದ್ದರು.

ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ

ಆರೋಪಿ ಸಹೋದರಿಯ ಪತಿಯಾಗಿರುವ ನಟ ವಿವೇಕ್ ಒಬೆರಾಯ್ ಮುಂಬೈ ಮನೆ ಮೇಲೂ ವಿಶೇಷ ತಂಡವು ದಾಳಿ ನಡೆಸಿ ಸಹೋದರಿ ಪ್ರಿಯಾಂಕಾ ಆಳ್ವಾನನ್ನು ವಿಚಾರಣೆ ನಡೆಸಿದ್ದರು. ಈ ನಡುವೆ, ಆದಿತ್ಯ ಜಾಮೀನು ಅರ್ಜಿ ಸಲ್ಲಿಸುವುದನ್ನು ಬಿಟ್ಟು, ತನ್ನ ವಿರುದ್ಧದ ಎಫ್‍ಐಆರ್ ರದ್ದು ಮಾಡುವಂತೆ ಆದಿತ್ಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಬಳಿಕ ನ್ಯಾಯಾಲಯವು ಅರ್ಜಿ ವಜಾಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News